ಕೂಲಿ ದರ ಹೆಚ್ಚಳಕ್ಕೆ ಶುಂಠಿ ಕಾರ್ಮಿಕರ ಆಗ್ರಹ

IMG-20251108-WA0004
ಶುಂಠಿ ಕಟಾವು ಕೂಲಿ ದರ ಹೆಚ್ಚಳ ಮಾಡುವತೆ ಎಚ್.ಡಿ. ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣದ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
Published on

ಎಚ್.ಡಿ. ಕೋಟೆ : ಕೇರಳ ಮೂಲದ ಶುಂಠಿ ಕಂಪನಿಗಳು ಮತ್ತು ಮಧ್ಯವರ್ತಿಗಳು ಶುಂಠಿ ಕಟಾವು ಮಾಡಲು ಕಡಿಮೆ ಕೂಲಿ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಚ್.ಡಿ. ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣದ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಶುಂಠಿ ಕಟಾವನ್ನು ಬಹಿಷ್ಕರಿಸಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು.

ಮೈಸೂರು-ಮಾನಂದವಾಡಿ ಹೆದ್ದಾರಿಗೆ ಹೊಂದಿಕೊಂಡಂತಿರುವ ಬೊಪ್ಪನಹಳ್ಳಿ ಸಮೀಪವಿರುವ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಕಚೇರಿ ಮುಂಭಾಗದಿಂದ ಹ್ಯಾಂಡ್‌ಪೋಸ್ಟ್ ಮಾರ್ಗವಾಗಿ ನೂರಾರು ವಾಹನಗಳಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಕಾಲ್ನಡಿಗೆ ಮೂಲಕ ಪ್ರತಿಭಟನಾ ಜಾಥಾ ನಡೆಸಿದರು.

ಸಂಘದ ಅಧ್ಯಕ್ಷ ಮಗ್ಗೆ ಸುಂದ್ರ ಮಾತನಾಡಿ, ಕೇರಳ ಮೂಲದ ಶುಂಠಿ ಕೊಳ್ಳುವ ಕಂಪನಿಗಳು ಶುಂಠಿ ಕೊಳ್ಳಲು ನಮ್ಮ ರಾಜ್ಯಕ್ಕೆ ಬಂದು ನಮ್ಮ ಸಂಘದಲ್ಲಿನ 5000 ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಶುಂಠಿ ಕಟಾವು ಮಾಡಿ 60 ಕೆಜಿ ತೂಕದ ಒಂದು ಚೀಲಕ್ಕೆ 275 ರೂ. ನೀಡುತ್ತಿದ್ದರು. ಆದರೆ ಕ್ರಮೇಣ ಕಟಾವು ಹಣವನ್ನು ಕಡಿಮೆ ಮಾಡುತ್ತಾ ಬಂದಿದ್ದು ಒಂದು ಚೀಲಕ್ಕೆ ಈಗ 170 ರೂ.ಗಳನ್ನು ನೀಡುತ್ತಿದ್ದಾರೆ. ನಮ್ಮ ಸಂಘದ ಕೂಲಿ ಕಾರ್ಮಿಕರು ಬೇರೆ ದಾರಿ ಇಲ್ಲದೇ ಜೀವನ ನಿರ್ವಹಣೆಗಾಗಿ ಅವರು ನೀಡಿದ ಬೆಲೆಗೆ ಶುಂಠಿ ಕಟಾವು ಮಾಡುತ್ತಿದ್ದರು. ಆದರೀಗ 175 ರಿಂದ 150 ರೂ.ಗಳಿಗೆ ಇಳಿಸಿರುವುದರಿಂದ ನಮ್ಮ ಕಾರ್ಮಿಕರು ಶುಂಠಿ ಕಟಾವಿಗೆ ತೆರಳದೆ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.

ಕೇರಳ ಮೂಲದ ಶುಂಠಿ ಕೊಳ್ಳುವ ಕಂಪನಿಗಳಿಗೆ ಬಿಸಿ ಮುಟ್ಟಿಸುವವರೆಗೂ ನಾವು ಕಟಾವು ಮಾಡಲು ಜಮೀನುಗಳಿಗೆ ತೆರಳುವುದಿಲ್ಲ ಎಂದು ತಿಳಿಸಿದರು.

ಅಸ್ಸಾಂ ಕಾರ್ಮಿಕರ ಲಗ್ಗೆ : ಶುಂಠಿ ಕಟಾವು ಮಾಡಲು ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ಕರ್ನಾಟಕಕ್ಕೆ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಇಂದು ನಮ್ಮ ಕಾರ್ಮಿಕರನ್ನು ಕೇರಳ ಮೂಲದ ಶುಂಠಿ ಕಂಪನಿಗಳು ನಿರ್ಲಕ್ಷಿಸಿದ್ದಾರೆ. ಸ್ಥಳೀಯ ಕೂಲಿ ಕಾರ್ಮಿಕರನ್ನು ಪರಿಗಣಿಸದ ಕೇರಳ ಮೂಲದ ಶುಂಠಿ ಕಂಪನಿಗಳಿಗೆ ನಮ್ಮ ರೈತರು ಶುಂಠಿಯನ್ನು ಮಾರಬಾರದು ಎಂದು ಒತ್ತಾಯಿಸಿದ್ದಾರೆ. ಅಸ್ಸಾಂ ಮೂಲದ ಕೂಲಿ ಕಾರ್ಮಿಕರು ಕೇವಲ 150 ರೂ.ಗಳಿಗೆ ಒಂದು ಚೀಲ ಶುಂಠಿಯನ್ನು ಕಟಾವು ಮಾಡುತ್ತಿದ್ದಾರೆ, ಆದ್ದರಿಂದ ನಮ್ಮ ಕಾರ್ಮಿಕರಿಗೆ ತೊಂದರೆ ಉಂಟಾಗಿದೆ ಎಂದು ತಿಳಿಸಿದರು.

ಶಾಸಕ ಅನಿಲ್ ಚಿಕ್ಕಮಾದು ಅವರು ಮಧ್ಯ ಪ್ರವೇಶಿಸಿ ತಾಲೂಕಿನ ಶುಂಠಿ ಕಾರ್ಮಿಕರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕೂಲಿ ಕಾರ್ಮಿಕರು ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷ ನಾಗರಾಜು, ಉಪಾಧ್ಯಕ್ಷ ರಾಮಕೃಷ್ಣ, ಬೆಟ್ಟನಾಯಕ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಸಹಕಾರ್ಯದರ್ಶಿ ಸೋಮೇಶ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ಮರಿಸಿದ್ದಯ್ಯ, ನಿರ್ದೇಶಕರಾಗಿ ರಾಜು, ಬೆಟ್ಟನಾಯಕ, ಮಹದೇವನಾಯಕ ತೇಜಕುಮಾರ್, ಪ್ರವೀಣ್, ಕುಮಾರ್, ಬೆಟ್ಟನಾಯಕ, ಚಿಕ್ಕಣ್ಣ, ದುಂಡರಾಜು ಗೋವಿಂದರಾಜು, ಜೀವಿಕ ಸಂಘಟನೆ ಜೀವಿಕ ಬಸವರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net