

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಮತ್ತು ಹಾರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಾರದಿಂದ ಹಂತ ಹಂತವಾಗಿ ಸುರಿದ ಮಳೆಗೆ ಭೂಮಿ ಹದವಾಗಿದ್ದು, ರೈತರು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ್ದಾರೆ.
ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಏಪ್ರಿಲ್ ತಿಂಗಳಲ್ಲೇ ಅಗತ್ಯ ಮಳೆಯಾಗಿದ್ದು, ತಂಬಾಕು ನಾಟಿ ಕಾರ್ಯ ಸೇರಿದಂತೆ ಕೃಷಿ ಚಟುವಟಿಕೆಗೆ ಮಳೆ ಅನುವು ಮಾಡಿಕೊಟ್ಟಿದೆ. ಯುಗಾದಿ ಹಬ್ಬದ ಬಳಿಕ ಸುರಿದ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಸುಮಾರು ಹದಿನೈದು ದಿನಗಳ ಅಂತರದಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಿದ್ದು, ಈಗಾಗಲೇ ಶುಂಠಿ ಹಾಗೂ ತಂಬಾಕು ನಾಟಿ ಕಾರ್ಯ ಚುರುಕಾಗಿದೆ. ಶುಂಠಿ, ತಂಬಾಕು ಪಿರಿಯಾಪಟ್ಟಣ ತಾಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಇವುಗಳೊಂದಿಗೆ ರೈತರು ಗೆಣಸು, ಅಲಸಂದೆ, ಮುಸುಕಿನ ಜೋಳ ಸೇರಿದಂತೆ ಇತರ ಆಹಾರ ಧಾನ್ಯಗಳನ್ನೂ ಬಿತ್ತನೆ ಮಾಡುತ್ತಿದ್ದಾರೆ.
ಕಳೆದ ಬಾರಿ ಕೈಹಿಡಿಯದ ಶುಂಠಿ: ಎರಡು ವರ್ಷಗಳಿಗೆ ಹೊಲಿಕೆ ಮಾಡಿದರೆ ಕಳೆದ ವರ್ಷ ಶುಂಠಿ ಬೆಲೆ ದಿಢೀರ್ ಕುಸಿತ ಕಂಡಿತ್ತು. ಪರಿಣಾಮ ತಾಲೂಕಿನ ಬಹುತೇಕ ಶುಂಠಿ ಬೆಳೆಗಾರರು ನಷ್ಟವಾಗಿ ಕೈ ಸುಟ್ಟಿಕೊಂಡಿದ್ದಾರೆ. ಕೊವೀಡ್ ಬಳಿಕ ಶುಂಠಿ ದರ ಒಂದು ಮೂಟೆಗೆ 700 ರೂ.ನಿಂದ 1,500 ರೂ. ವರೆಗೆ ಮಾರಾಟವಾಗಿತ್ತು. ಕೊನೆಯ ಸಂದರ್ಭದಲ್ಲಿ 4 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೆ ದರ ಏರಿಕೆಯಾಗಿ ಶುಂಠಿ ಬೆಳೆಗಾರರಿಗೆ ಲಾಭ ತಂದಿತ್ತು. ಆದರೆ ಕಳೆದ ವರ್ಷ ಮತ್ತೆ ಕೇವಲ ಒಂದು ಸಾವಿರ ರೂ. ಗಡಿಯಲ್ಲಿ ಬೆಲೆ ಸಿಕ್ಕಿದ ಪರಿಣಾಮ, ರೈತರಿಗೆ ಬೆಲೆಯ ಶಾಕ್ ಅನ್ನು ಅರಗಿಸಿಕೊಳ್ಳಲಾಗಲಿಲ್ಲ. ಶುಂಠಿಗೆ ಪ್ರಮುಖವಾಗಿ ನೀರಾವರಿ ಸೌಲಭ್ಯ ಅಗತ್ಯ ಇದ್ದು, ಪಂಪ್‌ಸೆಟ್ ಹೊಂದಿರುವ ರೈತರು ಈಗಾಗಲೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ಇನ್ನು ತಂಬಾಕು ಬೆಳೆಗಾರರು ಟ್ರೇನಲ್ಲಿ ಬೆಳೆಸಿದ ತಂಬಾಕು ಸಸಿ ಮಡಿಯನ್ನು ಟ್ರ್ಯಾಕ್ಟರ್, ಎತ್ತಿನಗಾಡಿಗಳ ಮೂಲಕ ಕೊಂಡೊಯ್ದು ಹದ ಮಾಡಿದ ಜಮೀನಿನಲ್ಲಿ ನಾಟಿ ಕಾರ್ಯ ಆರಂಭಿಸುವ ಮೂಲಕ ಕೃಷಿ ಚುಟವಟಿಕೆಯಲ್ಲಿ ನಿರತರಾಗಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಸುರಿದ ಮಳೆಗೆ ಭೂಮಿ ಹದವಾಗಿರುವ ಪರಿಣಾಮ ಈ ಬಾರಿ ಬೇಗನೆ ಬೇಸಾಯ ಆರಂಭವಾಗಿದೆ. ಇದಲ್ಲದೆ ಶುಂಠಿ, ತಂಬಾಕು ಬೆಳೆಯುವವರ ನಡುವೆ ಕಳೆದೆರಡು ವರ್ಷದಿಂದ ಈ ಭಾಗದಲ್ಲಿ ಗೆಣಸು ಬೆಳೆಗಾರರ ಸಂಖ್ಯೆಯೂ ಹೆಚ್ಚಾಗಿದೆ. ಗೆಣಸನ್ನು ಮಿಶ್ರ ಬೆಳೆಯಾಗಿ ರೈತರು ಬೇಸಾಯ ಮಾಡುತ್ತಿದ್ದಾರೆ.
ಕೂಲಿ ಕಾರ್ಮಿಕರಿಗೆ ಡಿಮಾಂಡ್: ಸದ್ಯ ಮಳೆಯಾಗಿರುವುದರಿಂದ ಎಲ್ಲೆಡೆ ಕೃಷಿ ಚಟುವಟಿಕೆ ಏಕಕಾಲದಲ್ಲಿ ಆರಂಭವಾಗಿ ಕೃಷಿ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದೆ. ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಹಿಳಾ ಕೃಷಿ ಕಾರ್ಮಿಕರಿಗೆ 400-500, ಪುರುಷ ಕೃಷಿ ಕಾರ್ಮಿಕರಿಗೆ 700-800 ಕೂಲಿ ನೀಡಬೇಕಿದೆ. ವಿಪರ್ಯಾಸ ಎಂದರೆ ಶುಂಠಿ, ಗೆಣಸು ಹೀಗೆ ಹಲವು ಬೆಳೆಗಳ ಬೆಲೆಯು ಕುಸಿತಗೊಂಡಿದ್ದರೂ ಕೂಲಿ ಕಾರ್ಮಿಕರಿಗೆ ಮಾತ್ರ ಹೇಳಿದಷ್ಟು ಕೂಲಿ ನೀಡಬೇಕಿರುವುದು ರೈತರಿಗೆ ಒಂದು ಸಮಸ್ಯೆಯಾದರೆ, ಸ್ಥಳೀಯವಾಗಿ ಕೂಲಿ ಕಾರ್ಮಿಕರು ಸಿಗದೆ ಅಕ್ಕಪಕ್ಕದ ಗ್ರಾಮಗಳಿಂದ ಕರೆಸಿಕೊಳ್ಳುವ ಸ್ಥಿತಿ ಮತ್ತೊಂದು ಸಮಸ್ಯೆಯಾಗಿದೆ.