

ಮಡಿಕೇರಿ:
ರೈತರ ಪಾಲಿಗೆ ಹಣದ ಬೆಳೆ ಎಂದೇ ಪರಿಗಣಿತವಾಗಿರುವ ಶುಂಠಿಗೆ ಹೊಸದೊಂದು ಶಿಲೀಂದ್ರ ರೋಗ ಕಾಣಿಸಿಕೊಂಡಿದೆ. ಜಿಲ್ಲೆಯ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಈ ರೋಗ ಪ್ರಮುಖವಾಗಿ ಗುರುತಿಸಲಾಗಿದೆ. ಈ ರೋಗವು ಕೇವಲ 15 ರಿಂದ 20 ಗಂಟೆಗಳ ಅವಧಿಯಲ್ಲಿ ಇತರೆ ಪ್ರದೇಶಗಳಿಗೂ ವೇಗವಾಗಿ ಹರಡುವುದು ಆತಂಕಕ್ಕೆ ಕಾರಣವಾಗಿದೆ.
ಶುಂಠಿ ಮುಖ್ಯವಾದ ಸಾಂಬಾರು ಬೆಳೆಯಾಗಿದ್ದು, ಇದರ ಬೇರು ಕಾಂಡಗಳನ್ನು ಸಂಬಾರವಾಗಿ ಮತ್ತು ಔಷಧೀಯ ಗುಣಗಳಿಗಾಗಿ ಉಪಯೋಗಿಸುತ್ತಾರೆ. ಇದನ್ನು ಸುವಾಸನೆ ಮತ್ತು ಆಹಾರದ ಸ್ವಾದ ಹೆಚ್ಚಿಸಲು ಅಡಿಗೆಗಳಲ್ಲಿ, ಸೂಪ್‌ಗಳಲ್ಲಿ, ಉಪ್ಪಿನಕಾಯಿಯಲ್ಲಿ ಮಸಾಲೆಯಂತೆ ಬಳಸುತ್ತಾರೆ. ಅಲ್ಲದೆ ಔಷಧಿ, ಸುಗಂಧ ದ್ರವ್ಯ ತೆಗೆಯಲು ಉಪಯೋಗಿಸುತ್ತಾರೆ. ಇಂತಹ ಶುಂಠಿಯನ್ನು ಕೊಡಗು ಜಿಲ್ಲೆಯಾದ್ಯಂತಹ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಕೆಲವರು ಪಾಳು ಬಿಟ್ಟಿರುವ ಕೃಷಿ ಪ್ರದೇಶಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ಶುಂಠಿ ಬೆಳೆಯುತ್ತಿರುವುದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ. ಕಳೆದ ವರ್ಷ ಶುಂಠಿ ಕೊಯ್ಲು ಮಾಡುವ ಸಂದರ್ಭದಲ್ಲಿ ಒಂದು ಹೊಸ ರೋಗ ಕಾಣಿಸಿಕೊಂಡು ರೈತರಲ್ಲಿ ಆಂತಕಕ್ಕೆ ಕಾರಣವಾಗಿತ್ತು. ಆದರೆ ಈ ವರ್ಷ ಶುಂಠಿ ನಾಟಿ ಮಾಡಿ 70 ರಿಂದ 80 ದಿನಗಳು ಆಗಿದ್ದು ಈಗಾಗಲೇ ಹೊಸ ಶಿಲೀಂಧ್ರ ರೋಗ ತೀವ್ರವಾಗಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಕಾಣಿಸಿಕೊಂಡಿದ್ದು ರೈತರಲ್ಲಿ ಇನ್ನು ಹೆಚ್ಚಿನ ಆತಂಕ ಉಂಟುಮಾಡಿದೆ. ಕಲ್ಲಿಕೋಟೆ ಐ.ಸಿ.ಎ.ಆರ್.– ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ ಈ ರೋಗ ಭತ್ತ, ಗೋಧಿ ಮತ್ತು ಬಾರ್ಲಿಯಂತಹ ಏಕದಳ ಸಸ್ಯಗಳಲ್ಲಿ ಕಂಡುಬರುವ ಬೆಂಕಿ ರೋಗವನ್ನು ತರುವ ಶಿಲೀಂಧ್ರವಾದ ಪೈರಿಕ್ಯುಲೇರಿಯಾ ಎಂಬ ರೋಗಾಣುವಿನಿಂದ ಹರಡುತ್ತದೆ ಎಂದು ಕಂಡುಬಂದಿದೆ.
ಪ್ರಾರಂಭದಲ್ಲಿ ಗಿಡದ ಎಲೆಗಳ ಮೇಲೆ ಕಪ್ಪು ಅಥವಾ ಆಲಿವ್-ಹಸಿರು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲು ಕಂದು ಬಣ್ಣದ್ದಾಗಿರುತ್ತದೆ. ಇಂತಹ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಗಿಡದ ಎಲೆಗಳು ಹಳದಿಯಾಗಿ ಸುಟ್ಟು ಹೋದಂತೆ ಕಂಡುಬರುತ್ತದೆ.
ಒಮ್ಮೆ ಸೋಂಕು ತಗುಲಿದರೆ ಅದು ವೇಗವಾಗಿ ಹರಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ಇಡೀ ಹೊಲವನ್ನು ಆವರಿಸುತ್ತದೆ. ರೋಗ ತೀವ್ರವಾದಾಗ ಶುಂಠಿಯ ಎಲೆ ಮತ್ತು ಕಾಂಡದ ಒಣಗುವಿಕೆಗೆ ಕಾರಣವಾಗುತ್ತದೆ.
ಇದರಿಂದ ಗೆಡ್ಡೆಗಳ ಬೆಳವಣಿಗೆಯು ಕುಂಠಿತವಾಗಿ ಗೆಡ್ಡೆಗಳ ತೂಕದಲ್ಲಿ ಶೇ. 30 ರಷ್ಟು ನಷ್ಟವನ್ನು ಕಾಣಬಹುದಾಗಿದೆ.
ಈ ರೋಗವನ್ನು ತರುವ ಶಿಲೀಂಧ್ರವಾದ ಪೈರಿಕ್ಯುಲೇರಿಯಾ ಎಂಬ ರೋಗಾಣುವಿನ ಬೀಜಕಣಗಳು ಗಾಳಿಯ ಮುಖಾಂತರ ಇತರ ಗಿಡಗಳಿಗು ಹರಡುತ್ತವೆ. ಈ ರೋಗ ವೃದ್ಧಿಯಾಗಲು ಹೆಚ್ಚು ಆರ್ದ್ರತೆ (86-98%), ಕಡಿಮೆ ರಾತ್ರಿ ಉಷ್ಣಾಂಶ (20 ಸೆ.) ಮತ್ತು ಸಾರಜನಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದಾಗ ತೀವ್ರವಾಗಿ ಕಂಡುಬರುತ್ತದೆ. ಬೆಳಗಿನ ಇಬ್ಬನಿ, ಮೋಡ ಕವಿದ ವಾತಾವರಣ, ಸಾಲುಗಳ ನಡುವಿನ ಅಂತರ, ಹೆಚ್ಚು ಮಳೆ ಮತ್ತು ತುಂತುರು ಮಳೆ ಹನಿ, ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಮಳೆ ಈ ರೋಗ ತೀವ್ರವಾಗಿ ಹರಡಲು ಕಾರಣಗಳಾಗಿವೆ. ಈ ರೋಗವು ಕೇವಲ 15 ರಿಂದ 20 ಗಂಟೆಗಳ ಅವಧಿಯಲ್ಲಿ ಇತರೆ ಪ್ರದೇಶಗಳಿಗೂ ವೇಗವಾಗಿ ಹರಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಗೋಣಿಕೊಪ್ಪಲು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಬಹುದಾಗಿದೆ.
===
ಸಾರಜನಕವನ್ನು ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಕೊಡಬೇಕು.
ಬೀಜದ ಗೆಡ್ಡೆಗಳನ್ನು ಶೇಖರಿಸುವ ಮೊದಲು 1.0 ಮಿ.ಲಿ ಪ್ರೊಪಿಕೋನಜೋಲ್ ಅಥವಾ 2.0 ಗ್ರಾಂ ಕಾರ್ಬೆಂಡಜಿಮ್ ಮತ್ತು ಮ್ಯಾಂಕೋಜೆಬ್ ಎಂಬ ಶಿಲೀಂಧ್ರನಾಶಕದಲ್ಲಿ ಪ್ರತಿ ಲೀಟರ್ ನೀರಿಗೆ ಬೆರಸಿ 30 ನಿಮಿಷಗಳ ಕಾಲ ಅದ್ದಿ ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಶೇಖರಿಸಬೇಕು.
ಈ ರೋಗದ ಬಾಧೆ ಈಗಾಲೆ ಕಂಡು ಬಂದಿರುವ ಶುಂಠಿಯ ತೋಟಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 1.0 ಮಿ.ಲಿ ಪ್ರೊಪಿಕೋನಜೋಲ್ ಅಥವಾ ಟೆಬುಕೊನಜೋಲ್ 1.0 ಮಿ.ಲಿ ಎಂಬ ಶಿಲೀಂಧ್ರನಾಶಕವನ್ನು ಅಂಟು ದ್ರಾವಣವನ್ನು ಸೇರಿಸಿ ಮಳೆ ಬಿಡುವು ಕೊಟ್ಟಾಗ ಸಿಂಪಡಿಸಬೇಕು.
ಪೈರಿಕ್ಯುಲೇರಿಯ ಶಿಲೀಂಧ್ರವು ಅತಿ ವೇಗವಾಗಿ ಹರಡುವುದರಿಂದ ರೈತರು ತ್ವರಿತಗತಿಯಲ್ಲಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.
ಡಾ. ಕೆ.ವಿ. ವೀರೇಂದ್ರ ಕುಮಾರ್, ಸಸ್ಯ ಸಂರಕ್ಷಣಾ ತಜ್ಞ, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು