

ಮಡಿಕೇರಿ:
ದುಡ್ಡಿನ ಬೆಳೆ ಎಂದೇ ಪರಿಗಣಿಸಿರುವ ಶುಂಠಿ ಬೆಳೆದ ರೈತರು ಬೆಲೆ ಇಲ್ಲದೆ ಸಂಕಷ್ಟದಲ್ಲಿ ಇದ್ದಾರೆ. ಈ ಮಧ್ಯೆ ರೈತರ ನೆರವಿಗೆ ಬರುವ ಉದ್ದೇಶದಿಂದ ಕೃಷಿ ಮಾರಾಟ ಇಲಾಖೆ ಎಪಿಸಿಎಂಎಸ್ ಮೂಲಕ ಹಸಿ ಶುಂಠಿ ಖರೀದಿಗೆ ಮುಂದಾಗಿದೆ. ಆದರೆ ಶುಂಠಿ ಖರೀದಿಗೆ ಸರ್ಕಾರ ನಿಗದಿ ಮಾಡಿರುವ ದರ ಮಾರುಕಟ್ಟೆ ಮೇಲೆ ವ್ಯತ್ಯರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುವ ಬಗ್ಗೆ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಶುಂಠಿಯನ್ನು ಜೂಜಿನ ಬೆಳೆ ಎಂದು ಕೂಡ ಕರೆಯಲಾಗುತ್ತದೆ. ಈ ಬೆಳೆ ಬೆಳೆದು ಬಹಳಷ್ಟು ಕೃಷಿಕರು ಆರ್ಥಿಕವಾಗಿ ಸದೃಢರಾಗಿದ್ದರೆ, ಮತ್ತೊಂದು ಕಡೆ ತಮಗೂ ಒಳ್ಳೆ ಕಾಲ ಬರಬಹುದು ಎನ್ನುವ ಆಸೆ ಇಟ್ಟುಕೊಂಡು ಮತ್ತೆ ಮತ್ತೆ ಶುಂಠಿ ಕೃಷಿ ಮಾಡುತ್ತಾ ಕೈ ಸುಟ್ಟುಕೊಳ್ಳುತ್ತಿರುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ 60 ಕೆಜಿ ತೂಕದ ಒಂದು ಚೀಲ ಬಿತ್ತನೆ ಶುಂಠಿಗೆ ಸುಮಾರು 6 ಸಾವಿರ ರೂ. ಬೆಲೆ ಇತ್ತು. ಈ ವರ್ಷ ಈ ಬೆಲೆ 1.5 ಸಾವಿರ ರೂ.ಗಳ ಆಸುಪಾಸಿನಲ್ಲಿದೆ. ಮಾರುಕಟ್ಟೆ ದರ 60 ಕೆಜಿ ತೂಕದ ಒಂದು ಚೀಲಕ್ಕೆ 1,200-1600ರ ತನಕ ಇದೆ.
ಶುಂಠಿ ಬೆಲೆ ಇಳಿಕೆಯ ಹಾದಿಯಲ್ಲಿ ಇರುವಂತೆಯೇ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಶುಂಠಿ ಬೆಳೆಗಾರರು ಸರ್ಕಾರದ ಮೊರೆ ಹೋಗಿದ್ದರು. ಕೊಡಗಿನಲ್ಲೂ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಕೃಷಿ ಮಾರಾಟ ಇಲಾಖೆ ಎಪಿಸಿಎಂಎಸ್ ಮೂಲಕ ಹಸಿ ಶುಂಠಿ ಖರೀದಿಗೆ ಮುಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯುವ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕುಗಳಿಗೆ ಸಂಬAಧಿಸಿದAತೆ ಕುಶಾಲನಗರ ಎಪಿಸಿಎಂಎಸ್ ಮತ್ತು ಸೋಮವಾರಪೇಟೆ ಎಪಿಸಿಎಂಎಸ್‌ನಲ್ಲಿ ಹಸಿಶುಂಠಿ ಖರೀದಿ ಕೇಂದ್ರ ಶುರು ಮಾಡಲಾಗಿದೆ.
ಎಪಿಸಿಎಂಎಸ್‌ಗಳಲ್ಲಿ ತೆರೆಯಲಾಗಿರುವ ಹಸಿ ಶುಂಠಿ ಖರೀದಿ ಕೇಂದ್ರಕ್ಕೆ ಶುಂಠಿ ಮಾರಾಟ ಮಾಡಬೇಕಾದರೆ ಕೃಷಿಕರು ಪ್ರೂಟ್ಸ್ ಐಡಿ ಹೊಂದಿರಬೇಕು. ತೋಟಗಾರಿಕ ಪರಿಣಿತ ಅಧಿಕಾರಿಗಳಿಂದ ದೃಢೀಕರಿಸಿದ ಗುಣಮಟ್ಟದ ಹಸಿಶುಂಠಿಯನ್ನು ಮಾತ್ರ ಈ ಖರೀದಿ ಕೇಂದ್ರಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಎಫ್.ಎ.ಕ್ಯೂ. ಗುಣಮಟ್ಟ ಹೊಂದಿರುವ ಶುಂಠಿಗೆ ಮಾತ್ರ ಈ ಖರೀದಿ ಕೇಂದ್ರದಲ್ಲಿ ಅವಕಾಶವಿದೆ. ಸರ್ಕಾರ ಕ್ವಿಂಟಾಲ್‌ಗೆ 2,445 ರೂ. ದರ ನಿಗದಿ ಪಡಿಸಿದೆ. ಅಂದರೆ 60 ಕೆಜಿ ತೂಕದ ಚೀಲಕ್ಕೆ 1,467 ರೂ. ಆಗಲಿದೆ.
ಸರ್ಕಾರ ನಿಗದಿಪಡಿಸಿದ ಈ ಬೆಲೆ ಉತ್ತಮ ಗುಣಮಟ್ಟದ ಶುಂಠಿಗೆ ಮಾತ್ರ ಸಿಗುತ್ತದೆ. ಈ ಬೆಲೆಯಿಂದ ಸ್ವಂತ ಜಮೀನಿನಲ್ಲಿ ಬೆಳೆದು ಮಾರುವವರಿಗೆ ಅರಕ್ಕೆ ಏರದ, ಮೂರಕ್ಕೆ ಇಳಿಯದ ಪ್ರಮಾಣದಲ್ಲಿ ಪ್ರಯೋಜನ ಆಗಬಹುದು. ಆದರೆ ಬೇರೆಯವರ ಜಮೀನನ್ನು ಭೋಗ್ಯಕ್ಕೆ ಪಡೆದುಕೊಂಡು ಶುಂಠಿ ಕೃಷಿ ಮಾಡುವವರಿಗೆ ಯಾವುದೇ ಉಪಯೋಗ ಇಲ್ಲ ಎನ್ನುವುದು ಅನುಭವಿ ಶುಂಠಿ ಕೃಷಿಕರ ಮಾತು. ಮಳೆ ಶುರುವಾದರೆ ಶುಂಠಿ ಗುಣಮಟ್ಟದ ಮೇಲೂ ಪರಿಣಾಮ ಬೀರಲಿದ್ದು, ಎಪಿಸಿಎಂಎಸ್‌ಗೆ ಕೊಡಲು ಆಗದಂಥ ಪರಿಸ್ಥಿತಿ ಇರುತ್ತೆ. ಈ ಸಂದರ್ಭದಲ್ಲೂ ಖರೀದಿ ಕೇಂದ್ರದಿAದ ರೈತರಿಗೆ ಅನುಕೂಲ ಆಗುವುದಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.
6 ರಿಂದ 8 ತಿಂಗಳ ಅವಧಿಗೆ ಒಂದು ಎಕರೆ ಜಮೀನಿನಲ್ಲಿ ಶುಂಠಿ ಬೆಳೆಯಲು ಸುಮಾರು 4.50 ಲಕ್ಷ ರೂ.ಗಳಿಂದ 5 ಲಕ್ಷ ರೂ. ತನಕ ಖರ್ಚು ಬರುತ್ತದೆ. ಭೋಗ್ಯಕ್ಕೆ ತೆಗೆದುಕೊಳ್ಳುವ ಜಮೀನಾದರೆ ಅದಕ್ಕೆ ಇನ್ನೊಂದಿಷ್ಟು ಹೆಚ್ಚು ವೆಚ್ಚ ತಗುಲುತ್ತದೆ. ಒಂದು ಅಂದಾಜಿನAತೆ ಒಂದು ಎಕರೆ ಜಾಗದಲ್ಲಿ 300 ರಿಂದ 350 ಚೀಲ ಶುಂಠಿ ಇಳುವರಿ ಬರಬೇಕು. ಆದರೆ ಈಗ ವಿವಿಧ ಕಾರಣಗಳಿಂದ ಇಳುವರಿ ಕಡಿಮೆ ಆಗಿದ್ದು 150 ರಿಂದ 200 ಚೀಲಕ್ಕೆ ಬಂದು ನಿಂತಿದೆ. ಈಗಿನ ಮಾರುಕಟ್ಟೆ ದರದಲ್ಲಿ ಎಕರೆಯಲ್ಲಿ ಬೆಳೆದ ಶುಂಠಿ ಮಾರಾಟ ಮಾಡಿದರೆ 2 ಲಕ್ಷ ರೂ. ಕೂಡ ಸಿಗುತ್ತಿಲ್ಲ ಎನ್ನುವುದು ಶುಂಠಿ ಬೆಳೆಗಾರರ ಆಳಲು.
ಕೃಷಿ ಮಾರಾಟ ಇಲಾಖೆ ಮುಖಾಂತರ ಮಾರಾಟ ಮಾಡಿದರೂ ಕೃಷಿಕರಿಗೆ ಹೆಚ್ಚಿನ ಲಾಭವೇನೂ ಸಿಗುವುದಿಲ್ಲ. ಖರ್ಚು ಮಾಡಿದ ಹಣ ಸಿಗಬಹುದಷ್ಟೇ ಎನ್ನುತ್ತಾರೆ ಶುಂಠಿ ಕೃಷಿಕರು. ಶುಂಠಿಗೆ ಸರ್ಕಾರ ಕ್ವಿಂಟಾಲ್‌ಗೆ 2,445 ರೂ. ದರ ನಿಗದಿ ಪಡಿಸಿದ್ದು, 60 ಕೆಜಿ ತೂಕದ ಚೀಲಕ್ಕೆ 1,467 ರೂ. ಆಗಲಿದೆ. ಈ ಪ್ರಕಾರ ಲೆಕ್ಕಹಾಕಿದರೆ ಎಕರೆಗೆ ಸರಾಸರಿ 250 ಚೀಲ ಇಳುವರಿ ಎಂದು ಅಂದಾಜಿಸಿದರೂ 3,66,750 ಲಕ್ಷ ರೂ. ಸಿಗಲಿದೆ. ಅದು ಕೂಡ ಸರ್ಕಾರ ನಿಗದಿಪಡಿಸಿದ ಗುಣಮಟ್ಟ ಹೊಂದಿರುವ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರಮಾಣಿಕರಿಸಿದ ನಂತರವಷ್ಟೇ ಈ ಹಣ ಸಿಗಲು ಸಾಧ್ಯ. ಆದರೆ ರೈತ ಒಂದು ಎಕರೆಯಲ್ಲಿ ಶುಂಠಿ ಬೆಳೆಯಲು ಸುಮಾರು 4.5 ಲಕ್ಷ ರೂ. ಖರ್ಚು ಮಾಡಿರುತ್ತಾನೆ.
ಮಾರುಕಟ್ಟೆಯಲ್ಲಿ ಸದ್ಯಕ್ಕೆ ಶುಂಠಿ ಬೆಲೆ ಏರಿಳಿತ ಕಾಣುತ್ತಿದೆ. 1,200-1600ರ ತನಕ ವ್ಯಾಪಾರಿಗಳು ಖರೀದಿ ಮಾಡುತ್ತಿದ್ದಾರೆ. ಈ ವರ್ಷ ಇನ್ನು ಬೆಲೆ ಹೆಚ್ಚಳ ಅನುಮಾನ ಎನ್ನಲಾಗುತ್ತಿದೆ. ಕಳೆದ ವರ್ಷದ ಮಾರ್ಚ್ ಏಪ್ರಿಲ್‌ನಲ್ಲಿ ಬೆಳೆದ ಶುಂಠಿ ಹಳೆಯದಾಗಿದ್ದು ಅದನ್ನೇ ಕಡಿಮೆ ಬೆಲೆಗೆ ವ್ಯಾಪಾರಸ್ಥರು ಕೇಳುತ್ತಿದ್ದಾರೆ. ಇನ್ನು ಕೆಲವು ತಿಂಗಳುಗಳಲ್ಲಿ ಹೊಸ ಶುಂಠಿ ಮಾರುಕಟ್ಟೆಗೆ ಬರುವುದರಿಂದ ಬೇಡಿಕೆ ಕುಸಿಯಲಿದ್ದು, ಬೆಲೆ ಹೆಚ್ಚಳದ ಸಾಧ್ಯತೆ ಕ್ಷೀಣವಾಗಿದೆ ಎನ್ನುವುದು ಶುಂಠಿ ವ್ಯಾಪಾರಿಗಳ ಅಭಿಪ್ರಾಯ.
ಮತ್ತೊಂದು ಕಡೆ ಜಮೀನಿನಲ್ಲಿ ಇರುವ ಶುಂಠಿಗೆ ರೋಗ ಭೀತಿ ಕಾಣಿಸಿಕೊಂಡಿದೆ. ಈ ಶುಂಠಿಯನ್ನು ಹುಳುಗಳು ಕೊರೆದು ನಾಶ ಮಾಡುತ್ತಿವೆ. ಇಂಥ ಶುಂಠಿ ಮಾರುಕಟ್ಟೆಗ ಬಂದಾಗ ಅತ್ಯಂತ ಕಡಿಮೆ ಬೆಲೆ ಕೊಡಲಾಗುತ್ತಿದೆ. ಶುಂಠಿ ಬೆಳೆಯಲು ಆರಂಭವಾದ ನಂತರ ಇಲ್ಲಿಯ ತನಕ ಶುಂಠಿ ಬೆಳೆಗೆ ಇಂಥ ದುಸ್ಥಿತಿ ಬಂದಿರಲಿಲ್ಲ ಎನ್ನುತ್ತಾರೆ ಅನುಭವಿ ಕೃಷಿಕರು. ಶುಂಠಿ ಬೆಳೆ ಮತ್ತು ಬೆಲೆಯ ಈ ಅನಿಶ್ಚಿತತೆಯಿಂದ ಈ ವರ್ಷ ಬಹಳಷ್ಟು ರೈತರು ಶುಂಠಿ ಬೆಳೆಯಿಂದ ವಿಮುಖರಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅಲ್ಪಾವಧಿ ಬೆಳೆಯಾಗಿರುವ ಶುಂಠಿ ಹೆಚ್ಚು ಲಾಭ ತಂದು ಕೊಡುತ್ತದೆ ಎನ್ನುವ ರೈತರ ನಂಬಿಕೆ ಈ ಬೆಳೆಯತ್ತ ಹಲವರನ್ನು ಆಕರ್ಷಿಸುತ್ತಿದೆ.
ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ಕೊಡಗಿನಲ್ಲಿ 2024-25ನೇ ಸಾಲಿನಲ್ಲಿ ಒಟ್ಟು 806 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿ 8,894.2 ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿದೆ. ಕುಶಾಲನಗರ ತಾಲೂಕಿನಲ್ಲಿ ಅತೀ ಹೆಚ್ಚು ಎಂದರೆ 501 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆದು 5511 ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗಿದೆ. ಉಳಿದಂತೆ ಮಡಿಕೇರಿ ತಾಲೂಕಿನ 50 ಹೆಕ್ಟೇರ್ ಪ್ರದೇಶದಲ್ಲಿ 625 ಟನ್, ಸೋಮವಾರಪೇಟೆ ತಾಲೂಕಿನ 203 ಹೆಕ್ಟೇರ್ ಪ್ರದೇಶದಲ್ಲಿ 2233 ಮೆ.ಟ., ವಿರಾಜಪೇಟೆ ತಾಲೂಕಿನ 12 ಹೆಕ್ಟೇರ್ ಪ್ರದೇಶದಲ್ಲಿ 121.20 ಮೆ.ಟ. ಹಾಗೂ ಪೊನ್ನಂಪೇಟೆ ತಾಲೂಕಿನ 40 ಹೆಕ್ಟೇರ್‌ನಲ್ಲಿ 404 ಮೆ.ಟ. ಶುಂಠಿ ಉತ್ಪಾದಿಸಲಾಗಿದೆ.
ಎಪಿಸಿಎಂಎಸ್ ಮೂಲಕ ಸರ್ಕಾರ ಹಸಿ ಶುಂಠಿ ಖರೀದಿಸುತ್ತಿರುವುದು ಸ್ವಾಗತಾರ್ಹ. ಆದರೆ ಅಲ್ಲಿ ಸಿಗುತ್ತಿರುವ ಬೆಲೆಯಿಂದ ಹೆಚ್ಚಿನ ಶುಂಠಿ ಕೃಷಿಕರಿಗೆ ಪ್ರಯೋಜನ ಆಗುವುದಿಲ್ಲ. ಅದರಲ್ಲೂ ಭೋಗ್ಯಕ್ಕೆ ಜಮೀನು ಪಡೆದು ಶುಂಠಿ ಬೆಳೆದವರಿಗೆ ಉಪಯೋಗವೇ ಇಲ್ಲ. ಅಲ್ಲಿ ಗುಣಮಟ್ಟದ ಶುಂಠಿ ಮಾತ್ರ ಖರೀದಿ ಮಾಡುವುದರಿಂದ ಉಳಿದ ಶುಂಠಿ ಏನು ಮಾಡುವುದು ಗೊತ್ತಾಗುವುದಿಲ್ಲ. ಮಾರುಕಟ್ಟೆ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಸಿ ಶುಂಠಿ ಖರೀದಿ ವ್ಯವಸ್ಥೆಯನ್ನು ಇನ್ನಷ್ಟು ರೈತ ಸ್ನೇಹಿಯಾಗಿ ರೂಪಿಸಬೇಕಿತ್ತು.
ಬೇಬಿ, ಶುಂಠಿ ಬೆಳೆಗಾರ, ಸಿದ್ಧಲಿಂಗಪುರ
ಕೊಡಗಿನಲ್ಲಿ 2024-25ನೇ ಸಾಲಿನಲ್ಲಿ 806 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿ 8,894.2 ಮೆಟ್ರಿಕ್ ಟನ್ ಶುಂಠಿ ಇಳುವರಿ ಪಡೆಯಲಾಗಿದೆ. ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಮಡಿಕೇರಿ ತಾಲೂಕಿನಲ್ಲಿ ಶುಂಠಿಯ ಇಳುವರಿ ಚೆನ್ನಾಗಿ ಬಂದಿದೆ. ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಶುಂಠಿ ಇಳುವರಿ 1 ಹೆಕ್ಟೇರ್‌ಗೆ 11.03 ಮೆಟ್ರಿಕ್ ಟನ್ ಇದೆ.
ಹೆಚ್.ಆರ್. ಯೋಗೇಶ್, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ, ಮಡಿಕೇರಿ