ಗಿಳಿವಿಂಡು ನಿರ್ವಹಣೆ ಕೇರಳ ಸರ್ಕಾರದ ಹೊಣೆ

Bdk_Gilivindu
Published on

ಮಂಜೇಶ್ವರ: ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಗಿಳಿವಿಂಡು ಕೇರಳದಲ್ಲಿರುವುದರಿಂದ ಅದನ್ನು ಸಮರ್ಥವಾಗಿ ನಿರ್ವಹಿಸಬೇಕಾದ್ದು ಎಲ್ಲರಿಗಿಂತ ಹೆಚ್ಚು ಕೇರಳ ಸರ್ಕಾರದ ಹೊಣೆ ಎಂದು ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ವೈದ್ಯ ಡಾ.ರಮಾನಂದ ಬನಾರಿ ತಿಳಿಸಿದರು.

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಗಿಳಿವಿಂಡು ಆಶ್ರಯದಲ್ಲಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಂಜೇಶ್ವರ ಗಿಳಿವಿಂಡಲ್ಲಿ ಭಾನುವಾರ ನಡೆದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ 142ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಿತಿ ಕೊಡಮಾಡುವ ರಾಷ್ಟ್ರಕವಿ ಮಂಜೇಶ್ವರ ಸ್ಮಾರಕ ಪ್ರಶಸ್ತಿಯನ್ನು ಸಾಹಿತಿ ಕೆ.ವಿ.ಕುಮಾರನ್ ಮಾಸ್ತರ್ ಅವರಿಗೆ ಪ್ರದಾನಗೈದು, ಸ್ಮಾರಕ ಸಮಿತಿ ಹೊಸತಾಗಿ ಪ್ರಕಟಿಸಿದ ಗೋವಿಂದ ಪೈಗಳ ಸಮಗ್ರ ಬದುಕು-ಸಾಧನೆಗಳ ಕುರಿತಾದ ಸುರಭಿ ಕೃತಿಯನ್ನು ಶಾಸಕ ಸಿ.ಎಚ್.ಕುಂಞಂಬು ಬಿಡುಗಡೆಗೊಳಿಸಿದರು.

ಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಜೀನ್ ಲವಿನೋ ಮೊಂತೆರೋ ಅಧ್ಯಕ್ಷತೆ ವಹಿಸಿದ್ದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ, ಕ.ಸಾ.ಪ. ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿದ್ದರು.

ಗಿಳಿವಿಂಡು ಪ್ರಧಾನ ಕಾರ್ಯದರ್ಶಿ ಎಂ.ಉಮೇಶ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಬಾಲಕೃಷ್ಣ ಮಾಸ್ತರ್ ವಂದಿಸಿದರು. ವನಿತಾ ಆರ್.ಶೆಟ್ಟಿ ಹಾಗೂ ಆಶಾ ದಿಲೀಪ್ ಸುಳ್ಯಮೆ ನಿರೂಪಿಸಿದರು.

ಕೃತಿಗಳ ಗಾಯನ, ಕವಿಗೋಷ್ಠಿ

ವರ್ಷಾ ಮತ್ತು ಬಳಗ ಮತ್ತು ನಿಶ್ಮಿತ್ ಬಳಗದವರಿಂದ ಗೋವಿಂದ ಪೈ ಕೃತಿಗಳ ಗಾಯನ, ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮ, ಕವಿಗೋಷ್ಠಿ ನಡೆಯಿತು. ಸುರಭಿ ಕೃತಿಯ ಬಗ್ಗೆ ಸಂಪಾದಕಿ ಆಶಾ ದಿಲೀಪ್ ಸುಳ್ಯಮೆ ಮಾತನಾಡಿದರು. ಕೃತಿಗೆ ಬರಹಗಳನ್ನು ನೀಡಿದ ಜಯಂತಿ ಕೆ, ಡಾ.ಯು.ಮಹೇಶ್ವರಿ, ಡಾ.ಸುಜೇಶ್ ಎಸ್, ಶಿವಶಂಕರ ಪಿ, ಶ್ರೀಲತಾ ಕೆ, ವನಿತಾ ಆರ್.ಶೆಟ್ಟಿ, ಉಮೇಶ್ ಎಂ.ಸಾಲ್ಯಾನ್ ಮೊದಲಾದವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net