ಎಲ್‌ಇಡಿ ಟಿವಿ ಗಿಫ್ಟ್ ಕೊಟ್ಟ ಸಚಿವ: ಕೆ.ಆರ್.ಪೇಟೆ ತಾಲೂಕಲ್ಲಿ ಉಡುಗೊರೆ ರಾಜಕೀಯ

04_02_Mdy_02(Gift)
Published on
ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಗೊರೆ ರಾಜಕೀಯವೂ ಶುರುವಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಕೆ.ಆರ್.ಪೇಟೆ ತಾಲೂಕಿನಲ್ಲಿ ಎಲ್‌ಇಡಿ ಟಿವಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಹಾಗೂ ಸೋಲು ಅನುಭವಿಸಿದ ಎಲ್ಲರಿಗೂ ಎಲ್‌ಇಡಿ ಟಿವಿಯನ್ನು ಉಡುಗೊರೆ ರೂಪದಲ್ಲಿ ನೀಡುವ ಮೂಲಕ ಸ್ಥಳೀಯ ಮುಖಂಡರ ಓಲೈಕೆಗೆ ಮುಂದಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಹಲವರಿಗೆ ಟಿವಿಯನ್ನು ನೀಡಲಾಗಿತ್ತು. ಅದರಂತೆ ಬೂಕನಕೆರೆ, ಅಕ್ಕಿಹೆಬ್ಬಾಳು ಹೋಬಳಿಯ 200ಕ್ಕೂ ಹೆಚ್ಚು ಜನರಿಗೆ ಟಿವಿ ವಿತರಣೆ ಹಾಗೂ ಸನ್ಮಾನ ಮಾಡುವುದರೊಂದಿಗೆ ಮುಖಂಡರನ್ನು ವಿಶ್ವಾಸಕ್ಕೆ ಪಡೆಯುವ ತಂತ್ರಗಾರಿಕೆ ಅನುಸರಿಸಿದ್ದಾರೆ.
ಯಾರೇ ಸ್ಪರ್ಧಿಸಿದರೂ ಸ್ವಾಗತ: ಕೆ.ಆರ್.ಪೇಟೆಯಿಂದ ಎಚ್.ಡಿ.ರೇವಣ್ಣ ಸ್ಪರ್ಧೆ ಮಾಡಿದರೂ ಸ್ವಾಗತ ಮಾಡುತ್ತೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಕೆ.ಆರ್.ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಅಥವಾ ಎಚ್.ಡಿ.ರೇವಣ್ಣ ಬಂದರೂ ಭಯದ ವಾತಾವರಣ ಇಲ್ಲ. ಚುನಾವಣೆ ಎದುರಿಸುವುದು ನಮ್ಮ ಧರ್ಮ. ನಮ್ಮ ತಾಲೂಕಿನ ಮತದಾರ ದೇವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸ್ಪರ್ಧೆ ಮಾಡುವುದಕ್ಕೆ ಬರಬೇಡಿ ಎಂದು ಹೇಳುವುದಕ್ಕೆ ನಾನ್ಯಾರು. ಯಾರು ಬೇಕಾದರೂ ಬರಬಹುದು. ಅಂತೆಯೇ ಯಾರು ಬೇಕಾದರೂ ಬರಲಿ. ನಾನು ಆ ರೀತಿ ದೊಡ್ಡ ಲೀಡರೇನಲ್ಲ. ಕೆ.ಆರ್.ಪೇಟೆ ಸೇವಕನಾಗಿ ಗುರುತಿಸಿಕೊಂಡಿದ್ದೇನೆ, ಸೇವಕನಾಗಿಯೇ ಇರುತ್ತೇನೆ. ಯಾರಿಗೂ ಕಾಂಪಿಟೆಷನ್ ಅಥವಾ ಕಂಪೇರ್ ಮಾಡುವುದಕ್ಕೆ ಹೋಗಲ್ಲ. ಅಭಿವೃದ್ಧಿ ಕೆಲಸಗಳನ್ನ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net