ದ್ರಾಕ್ಷಿಗೆ ಶೀಘ್ರವೇ ಜಿಐ ಟ್ಯಾಗ್ : ದಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೋಮು.ಟಿ ಹೇಳಿಕೆ

WhatsApp Image 2022-09-28 at 10.51.29 AM
ವಿಜಯಪುರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ಮಾತನಾಡಿದರು. ದ್ರಾಕ್ಷಿ ಮತ್ತು ದಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೋಮು.ಟಿ, ಎಂ.ಎಸ್.ರುದ್ರಗೌಡ, ಎಸ್.ಎಚ್.ನಾಡಗೌಡ, ಎಸ್.ಎಂ.ಬರಗಿಮಠ ಇದ್ದಾರೆ.
Published on

ವಿಜಯಪುರ : ರಾಜ್ಯದಲ್ಲಿ ಬೆಳೆಯುವ ದ್ರಾಕ್ಷಿಗೆ ಜಾಗತಿಕ ಸೂಚಿ (ಜಿಐ) ಟ್ಯಾಗ್ ನೀಡುವ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಸಿಗುವ ಸಾಧ್ಯತೆ ಇದೆ ಎಂದು ದ್ರಾಕ್ಷಿ ಮತ್ತು ದಾಕ್ಷಾರಸ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೋಮು.ಟಿ ಹೇಳಿದರು.

ರಾಜ್ಯದಲ್ಲಿ 2007-08ರಲ್ಲಿ ವೈನ್‌ಬೋರ್ಡ್ ಆರಂಭಗೊಂಡ ವೇಳೆ ಎರಡು ವೈನರಿಗಳು ಮಾತ್ರ ಇದ್ದವು. ಪ್ರಸ್ತುತ ಅದರ ಸಂಖ್ಯೆ 17ಕ್ಕೆ ಏರಿಕೆ ಆಗಿದೆ. ಆರಂಭದಲ್ಲಿ 10 ಲಕ್ಷ ಲೀಟರ್ ವೈನ್ ಉತ್ಪಾದಿಸಲಾಗುತ್ತಿತ್ತು. ಪ್ರಸ್ತುತ 1 ಕೋಟಿ ಲೀ. ವೈನ್ ಉತ್ಪಾದನೆ ಆಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರಂಭದಲ್ಲಿ ವೈನ್‌ಬೋರ್ಡ್ 10 ಕೋಟಿ ರೂ. ವಹಿವಾಟುವಿನಿಂದ ಆರಂಭಗೊಂಡಿದ್ದು, ಇದೀಗ 300 ಕೋಟಿ ರೂ. ವಹಿವಾಟು ಇದೆ. ವಿಶೇಷವಾಗಿ ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬೆಳೆಯುವ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ ಇದೆ. ಇಲ್ಲಿನ ಉತ್ಕೃಷ್ಟ ಗುಣಮಟ್ಟದ ಒಣದ್ರಾಕ್ಷಿಗೆ ದೇಶ-ವಿದೇಶದಲ್ಲಿ ಬಹು ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಜಿಐ ಟ್ಯಾಗ್ ದೊರಕಿದ್ದಲ್ಲಿ ದ್ರಾಕ್ಷಿ ಬೆಳೆಗಾರರಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್.ಎಂ.ಬರಗಿಮಠ ಮಾತನಾಡಿ, ಜಿಲ್ಲೆಯಲ್ಲಿ 21 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲೇ ಅತಿಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ. ಕಳೆದ ಮೂರು ವರ್ಷದಲ್ಲಿ 6ರಿಂದ 7 ಸಾವಿರ ಹೆಕ್ಟೇರ್ ದ್ರಾಕ್ಷಿ ಪ್ರದೇಶ ವಿಸ್ತರಣೆಗೊಂಡಿದೆ. ಕಳೆದ 2019-20ನೇ ಸಾಲಿನಲ್ಲಿ 9 ಸಾವಿರ ರೈತರು ಬೆಳೆವಿಮೆಗೆ ನೋಂದಾಯಿಸಿಕೊಂಡಿದ್ದರು. ಆಗ 116 ಕೋಟಿ ರೂ. ವಿಮೆ ಹಣ ರೈತರ ಖಾತೆಗೆ ನೇರವಾಗಿ ಜಮೆ ಆಗಿದೆ. 2021ರಲ್ಲಿ 10 ಸಾವಿರ ರೈತರು ಬೆಳೆವಿಮೆಗೆ ನೋಂದಾಯಿಸಿಕೊಂಡಿದ್ದು, 136 ಕೋಟಿ ರೂ. ಬೆಳೆ ವಿಮೆ ರೈತರಿಗೆ ಬಂದಿದೆ. ಆಪತ್ಕಾಲದಲ್ಲಿ ರೈತರಿಗೆ ಬೆಳೆ ವಿಮೆ ಕೈ ಹಿಡಿಯಲಿದ್ದು, ರೈತರು ಕಡ್ಡಾಯವಾಗಿ ಬೆಳೆವಿಮೆ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಕೆಎಂಎಫ್ ಮಾದರಿಯಲ್ಲಿ ಜಾರಿಯಾಗಲಿ
ಕೆಎಂಎಫ್ ಮಾದರಿಯಲ್ಲಿ ದ್ರಾಕ್ಷಾರಸ ಹಾಗೂ ಒಣ ದ್ರಾಕ್ಷಿಯನ್ನು ಜನರಿಗೆ ಸುಲಭವಾಗಿ ಕೈಗೆ ಎಟುಕುವಂತೆ ಸರ್ಕಾರ ಯೋಜನೆಯನ್ನು ಜಾರಿಗೊಳಿಸಬೇಕು. ಆನ್‌ಲೈನ್ ಮಾರುಕಟ್ಟೆಗೆ ಹೆಚ್ಚಿನ ಒತ್ತು ನೀಡಬೇಕು. ಕೃಷಿ ಕಾಯ್ದೆಗಳನ್ನು ಹಿಂಪಡೆದರೆ ದ್ರಾಕ್ಷಿ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ಹೇಳಿದರು.

ಬೆಳೆ ವಿಮೆ ಕಂತು ಪಾವತಿಸುವ ರೈತರಿಗೆ ವಿಮೆ ಪಾಲಿಸಿಯನ್ನು ನೀಡುವಂತಾಗಬೇಕು. ವಿಮಾ ಕಚೇರಿಯನ್ನು ವಿಜಯಪುರದಲ್ಲಿ ತೆರೆಯಬೇಕು ಎಂದು ಒತ್ತಾಯಿಸಿದರು. ಒಣದ್ರಾಕ್ಷಿ ಹಾಗೂ ತಾಜಾ ದ್ರಾಕ್ಷಿಯನ್ನು ರಫ್ತು ಮಾಡಲು ಸರ್ಕಾರ ಇನ್ನಷ್ಟು ಉತ್ತೇಜನ ನೀಡಬೇಕಿದೆ ಎಂದರು.

ಅಡಕೆ ಬೆಳೆಗಾರರಿಗೆ ರೆಡ್ ಕಾರ್ಪೆಟ್
ರಾಜಕೀಯ ನಾಯಕರು ಅಡಕೆ ಹಾಗೂ ಕಾಫಿ ಬೆಳೆಗಾರರಿಗೆ ರೆಡ್‌ಕಾರ್ಪೆಟ್ ಹಾಕಿ ಆಹ್ವಾನಿಸುತ್ತಾರೆ. ಆದರೆ ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆ ಬೆಳೆಯುವ ರೈತರ ಬಗ್ಗೆ ಹೆಚ್ಚಿನ ಒತ್ತು ನೀಡುವುದಿಲ್ಲ ಎಂದು ದ್ರಾಕ್ಷಿ ಬೆಳೆಗಾರರ ಸಂಘದ ನಿರ್ದೇಶಕ ಎಸ್.ಎಚ್.ನಾಡಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಅಡಕೆ ಬೆಳೆಯುವ ಜಿಲ್ಲೆಯಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಬೆಳೆಗಾರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಆ ರೀತಿ ಯಾವ ನಾಯಕರು ಉತ್ಸಾಹ ತೋರುತ್ತಿಲ್ಲ. ಆದರೆ ಶಾಸಕ ಬಸನಗೌಡ ಯತ್ನಾಳ ಅವರ ಪರಿಶ್ರಮದಿಂದಾಗಿ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಸರ್ಕಾರದಿಂದ 35 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದಕ್ಕೆ ಸೆ.30 ರಂದು ಸಿಎಂ ಬಸವರಾಜ ಬೊಮ್ಮಾಯಿ ಅಡಿಗಲ್ಲು ಸ್ಥಾಪನೆ ಆಗಮಿಸುತ್ತಿದ್ದಾರೆ ಎಂದರು.

ದ್ರಾಕ್ಷಿ ಬೆಳೆಗಾರರ ಸಂಘದ ನಿರ್ದೇಶಕ ಎಂ.ಎಸ್.ರುದ್ರಗೌಡ ಮತ್ತಿತರರಿದ್ದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net