ಜೆಡಿಎಸ್ ಬಿಟ್ಟು ಕಮಲ ಹಿಡಿದ ಘೊಟ್ನೇಕರ್

SIRSI GHOTNEKAR BJP
Published on

ಶಿರಸಿ: ವಿಧಾನ ಪರಿಷತ್ ಮಾಜಿ ಸದಸ್ಯ ಹಳಿಯಾಳದ ಶ್ರೀಕಾಂತ ಘೊಟ್ನೇಕರ್ ಶನಿವಾರ ಜೆಡಿಎಸ್ ತೊರೆದು ಕಮಲ ಹಿಡಿದರು.

ಇಲ್ಲಿಯ ಪಂಡಿತ ದೀನದಯಾಳ ಸಭಾಭವನದಲ್ಲಿ ಹಳಿಯಾಳದಿಂದ ಆಗಮಿಸಿದ್ದ ಸಾವಿರಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾದರು.

ಘೊಟ್ನೇಕರ್ ಹಾಗೂ ಬೆಂಬಲಿಗರಿಗೆ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಎಸ್.ಎಲ್. ಘೂಟ್ನೇಕರ ಬಿಜೆಪಿ ಸೇರ್ಪಡೆಗೊಂಡಿರುವುದರಿಂದ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಹಳ ದೊಡ್ಡ ಶಕ್ತಿ ಬಂದಿದೆ. ಮಾಜಿ ಎಂಎಲ್​ಸಿ ಎಸ್.ಎಲ್. ಘೂಟ್ನೇಕರ ಹಾಗೂ ಮಾಜಿ ಎಂಎಲ್​ಎ ಸುನೀಲ ಹೆಗಡೆ ಜೋಡೆತ್ತಿನಂತೆ ಕೆಲಸ ಮಾಡಿ, ಹಳಿಯಾಳ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಮಲ ಅರಳಿಸುತ್ತಾರೆ ಎಂಬ ವಿಶ್ವಾಸವಿದೆ. ಹಿರಿಯರು ಹಾಗೂ ಯುವಕರು ಸೇರ್ಪಡೆಗೊಂಡಿರುವುದು ಬಹಳ ದೊಡ್ಡ ಬಲ ತಂದಿದೆ. ಸಾಮಾನ್ಯ ಜನರ ಧ್ವನಿಯಾಗಿ ಪಕ್ಷ ಸಂಘಟನೆ ಮಾಡಬೇಕಿದೆ. ದೇಶ ಮೊದಲು ಎಂಬ ಪಕ್ಷ ನಮ್ಮದು. ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದರು. ಈ ಪ್ರಭುತ್ವವನ್ನು ಎಲ್ಲರೂ ಸೇರಿ ಮತ್ತೊಮ್ಮೆ ಸ್ಥಾಪಿಸೋಣ. ಘೊಟ್ನೇಕರ್ ಅವರ ಅಭಿಮಾನಿಗಳು ಇನ್ನೂ ಹೆಚ್ಚಿರುವುದರಿಂದ ಇನ್ನೊಮ್ಮೆ ಹಳಿಯಾಳದಲ್ಲಿ ಬೃಹತ್ ಸಮಾವೇಶ ಮಾಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭೌತಿಕ ಅಭಿವೃದ್ಧಿ ಜತೆ ನಮ್ಮ ಪರಂಪರೆ ಉಳಿಸಲು ಸಾಂಸ್ಕೃತಿಕ ಅಭಿವೃದ್ಧಿ ಮಾಡುತ್ತಿದೆ. ಜಗತ್ತಿನಲ್ಲಿ ವಿಶಿಷ್ಟವಾದ ಪಕ್ಷ ಬಿಜೆಪಿ. ಘೊಟ್ನೇಕರ ಪಕ್ಷ ಸೇರ್ಪಡೆಯಾಗಿರುವುದರಿಂದ ಆನೆ ಬಲ ಬಂದಿದೆ. ಹಿಂದುಳಿದ ಬುಡಕಟ್ಟು ಜನಾಂಗದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿರುವುದು ಬಿಜೆಪಿ. ಅಲ್ಲದೆ, ಹಿಂದುಳಿದ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.

ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷದಿಂದ ಅಭಿವೃದ್ಧಿ ಶೂನ್ಯವಾಗಿದೆ. ಮುಂದೆ ಬಿಜೆಪಿ ಸರ್ಕಾರ ಬರಲಿದ್ದು, ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ಆಶಿಸಿದರು.

ಪಕ್ಷದ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಬಿಜೆಪಿಗೆ ಐತಿಹಾಸಕ ವಿಜಯ ಸಿಕ್ಕಿದೆ. ಆ ರಾಜ್ಯಗಳಲ್ಲಿ ಗ್ರಾಮ ಪಂಚಾಯಿತಿಗೂ ಸ್ಪರ್ಧಿಸದ, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಪಡೆಯಿಂದ ಈ ಗೆಲುವು ಸಾಧ್ಯವಾಗಿದೆ. ಉತ್ತರ ಕನ್ನಡದಲ್ಲಿ ಸಮರ್ಪಿತ ಕಾರ್ಯಕರ್ತರು, ನೇತೃತ್ವ ಇದೆ. ಬಿಂದುವನ್ನು ಸಿಂಧುವಾಗಿಸುವ ಕಾರ್ಯವನ್ನು ಘೊಟ್ನೇಕರ್ ಮಾಡಿದ್ದಾರೆ. ಸಹಕಾರಿ ಹಾಗೂ ರಾಜಕೀಯ ರಂಗದಲ್ಲಿ ಅತ್ಯಂತ ಹಿರಿತನದ ವ್ಯಕ್ತಿ ಬಿಜೆಪಿ ಸೇರ್ಪಡೆಗೊಂಡಿರುವುದರಿಂದ ಇನ್ನಷ್ಟು ಬಲ ಬಂದಿದೆ ಎಂದರು.

ಬಿಜೆಪಿಗೆ ಸೇರ್ಪಡೆಗೊಂಡ ಶ್ರೀಕಾಂತ ಘೊಟ್ನೇಕರ್ ಮಾತನಾಡಿ, ನಾನು ಮೊದಲಿನಿಂದಲೂ ಆರ್​ಎಸ್​ಎಸ್ ಹಿನ್ನೆಲೆಯುಳ್ಳ ವ್ಯಕ್ತಿ. ಕೆಲ ಅನಿವಾರ್ಯ ಕಾರಣದಿಂದ ಕಾಂಗ್ರೆಸ್ ಕಡೆ ಹೋಗುವಂತಾಗಿತ್ತು. ಈಗ ಕೆಲ ಕಾರಣದಿಂದ ಆ ಪಕ್ಷ ತ್ಯಜಿಸಿದ್ದೇನೆ. ಜೆಡಿಎಸ್, ಕಾಂಗ್ರೆಸ್ ತೊರೆದ ಕಾರಣ ಬಹಿರಂಗಪಡಿಸುವುದಿಲ್ಲ, ಯಾರಿಗೂ ಕೆಟ್ಟದ್ದು ಬಯಸುವುದಿಲ್ಲ. ಬಿಜೆಪಿ ಸೇರಬೇಕು ಎಂಬುದು ನಮ್ಮ ಆಶಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಗೇರಿ ಅವರ ಪರವಾಗಿ ನಾವೆಲ್ಲ ಕೆಲಸ ಮಾಡಿದ್ದೇವೆ. ಪ್ರಧಾನಮಂತ್ರಿ ಮೋದಿ ಅವರನ್ನು ಇಂದು ಜಗತ್ತೇ ಒಪ್ಪಿಕೊಂಡಿದೆ. ಇನ್ಮುಂದೆ ಜಿಲ್ಲೆಯಲ್ಲಿ ನಾವು ಬಿಜೆಪಿ ಶಕ್ತಿ ತೋರಿಸೋಣ. ಸುನೀಲ ಹೆಗಡೆ ಮತ್ತು ನಾನು ಜತೆಗೂಡಿ ಹಳಿಯಾಳ, ಜೊಯಿಡಾ, ದಾಂಡೇಲಿ ಭಾಗಗಳಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿರುವುದರಿಂದ ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಾಜಿ ಶಾಸಕ ವಿವೇಕಾನಂದ ವೈದ್ಯ, ಪ್ರಮುಖರಾದ ಎಲ್.ಟಿ. ಪಾಟೀಲ, ಶಿವಾಜಿ ನರಸಾನಿ, ಆರ್.ಡಿ. ಹೆಗಡೆ, ಶರ್ವಿುಳಾ ಮಾದನಗೇರಿ, ನಿತ್ಯಾನಂದ ಗಾಂವ್ಕರ, ಗುರುಪ್ರಸಾದ ಹೆಗಡೆ ಹರ್ತೆಬೈಲ್, ರಾಜೇಂದ್ರ ನಾಯ್ಕ, ಪ್ರಶಾಂತ ನಾಯ್ಕ, ಶ್ರೀಕಾಂತ ಬಳ್ಳಾರಿ, ನಂದನ ಬೋರ್ಕರ್, ರಮೇಶ ನಾಯ್ಕ, ಎಂ.ಜಿ. ಭಟ್ಟ, ಈಶ್ವರ ನಾಯ್ಕ, ಇತರರಿದ್ದರು.

ಕಸ್ತೂರಿ ರಂಗನ್ ವರದಿ ನೆಪದಲ್ಲಿ ಜನರನ್ನು ತಪ್ಪು ದಾರಿಗೆ ತಳ್ಳುವ ಜನರಿಂದ ಎಚ್ಚರಿಕೆಯಿಂದ ಇರಬೇಕು. ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ರೈತರ ಪರ ಕಾಳಜಿ ಹೊಂದಿಲ್ಲ. | ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net