

ಬ್ರಹ್ಮಾವರ: ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂರಾರು ವರ್ಷದಿಂದ ಪ್ರತಿ ಅಮಾವಾಸ್ಯೆ ದಿನ ಪ್ರೇತಗಳ ಮದುವೆ ನಡೆಯುವ ಆಚರಣೆಯಿದ್ದು, ಗುರುವಾರ ಮೂರು ಪ್ರತ್ಯೇಕ ಕುಟುಂಬಿಕರ ಪ್ರೇತ ವಿವಾಹ, ಅರ್ಚಕ ಗಣಪತಿ ಉಡುಪ ಮತ್ತು ಬಳಗದವರಿಂದ ನೆರವೇರಿತು.
ಆಕಸ್ಮಿಕ, ಅಕಾಲ ಮರಣ ಹೊಂದಿದವರ ಆತ್ಮ, ಆಸೆ-ಆಕಾಂಕ್ಷೆ ಈಡೇರಿಸಿಕೊಳ್ಳದೆ ಅಂತರಿಕ್ಷದಲ್ಲಿ ಪ್ರೇತಗಳಾಗಿರುತ್ತದೆ ಮತ್ತು ಆಸೆ ನೆರವೇರಿಸುವಂತೆ ಕುಟುಂಬವನ್ನು ಕಾಡುತ್ತಾ ಇರುತ್ತವೆ. ಪೀಡೆ ನೀಡುವ ಪ್ರೇತಗಳಿಗೆ ವಿವಾಹ ಶಾಸ್ತ್ರ ಮಾಡಿ ಬಳಿಕ ಸದ್ಗತಿ ಮಾಡುವುದು ನಂಬಿಕೆ.
ದೇವಸ್ಥಾನದ ಎದುರು ಭಾಗದ ಶಂಖ ತೀರ್ಥ ಸರೋವರದಲ್ಲಿ ಪ್ರೇತವನ್ನು ಆಕರ್ಷಿಸಿ ಇರಿಸಲಾದ ತೆಂಗಿನಕಾಯಿ ಮೂಲಕ ನಾನಾ ಕರ್ಮಾಂಗ ಮಾಡಿ ಬಳಿಕ ದೇವಸ್ಥಾನದ ಎದುರು ಭಾಗದಲ್ಲಿ 2 ತೆಂಗಿನ ಗಿಡಕ್ಕೆ ಗಂಡು ಹೆಣ್ಣಿಗೆ ಮದುವಣಗಿತ್ತಿಗೆ ಅಲಂಕಾರ ಮಾಡಿದಂತೆ ಸೀರೆ ಪಂಚೆ ಶಾಲು ಕಾಲುಂಗುರ ಕರಿಮಣಿ ನೀಡಿ ಬೇರೆ ಗೋತ್ರ ಅಥವಾ ಬಳಿಯವರೊಂದಿಗೆ ತಾಂಬೂಲ ಬದಲಾವಣೆ ಮಾಡಿ ಬಳಿಕ ಮದುವೆ ಶಾಸ್ತ್ರ ಮಾಡಲಾಗುತ್ತದೆ. ಬಳಿಕ ತೆಂಗಿನ ಕಾಯಿಯಲ್ಲಿ ಆವಾಹನೆ ಮಾಡಲಾದ ಪ್ರೇತವನ್ನು ಮತ್ತೊಂದು ತೆಂಗಿನಕಾಯಿ ಜತೆ ಅವರಿಗೆ ಸಂಬಂದಿಸಿದ ದೈವಸ್ಥಾನದಲ್ಲಿ ಒಡೆಯಲಾಗುತ್ತದೆ. ಇದು ನೂರಾರು ವರ್ಷದಿಂದ ನಡೆದುಕೊಂಡು ಬರುತ್ತಿದೆ.
ಹಲವಾರು ವರ್ಷದಿಂದ ಈ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆಯಂದು ಪ್ರೇತ ಮೋಕ್ಷ, ಪ್ರೇತ ವಿವಾಹ ಸದ್ಗತಿ ಮಾಡುತ್ತೇವೆ. ದೇವರ ಕೈಯಲ್ಲಿ ಮೋಕ್ಷಪಿಂಡ ಹಿಡಿದ ಭಂಗಿಯಲ್ಲಿ ಇದ್ದು ಗೋತ್ರ ಮೂಲದವರು ಮತ್ತು ಬಳಿ ಮೂಲದವರ ಪ್ರೇತಾತ್ಮಕ್ಕೆ ಮೋಕ್ಷದಾಯಕ ಸ್ಥಳ ಎನ್ನುವ ಇತಿಹಾಸ ಇದೆ.- ಗಣಪತಿ ಉಡುಪಅರ್ಚಕರು, ಶ್ರೀ ಜನಾರ್ದನ ದೇವಸ್ಥಾನ, ಕೂಡ್ಲಿ ಬಾರಕೂರು ನಮ್ಮ ಕುಟುಂಬಿಕರೊಬ್ಬರು 50 ವರ್ಷದಿಂದ ಮನೆಯಿಂದ ದೂರಹೋಗಿ, ಮರಳಿ ಬಂದಿಲ್ಲ. ಅವರು ಅವಿವಾಹಿತರಾಗಿದ್ದು, ಮೃತರಾಗಿ ಮೋಕ್ಷ ಸಿಗಲಿಲ್ಲ. ಆತ್ಮ ಸದ್ಗತಿ ಮತ್ತು ವಿವಾಹ ಮಾಡಬೇಕು ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂತು. ಅದನ್ನು ಇಂದು ಕುಟುಂಬಿಕರು ಸೇರಿ ಮಾಡಿದ್ದೇವೆ.- ಡಾ.ನಿತೀನ್ ಹರಿಹರ