ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲಗೆ ಘೇರಾವ್ ಎಚ್ಚರಿಕೆ

Farmer Protest ananist minister hanagal
Published on

ಹಾನಗಲ್ಲ: ಜಿಲ್ಲಾ ಉಸ್ತುವಾರಿ ಸಚಿವರು ಸೆ. 25ರಂದು ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮ ಮುಂದೂಡಬೇಕು. ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಬರಪೀಡಿತವೆಂದು ಘೊಷಿಸುವವರೆಗೆ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ. ಆದಾಗ್ಯೂ ನಡೆಸಿದ್ದೇ ಆದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಮಂತ್ರಿಗಳಿಗೆ ಘೇರಾವ್ ಹಾಕಲಾಗುವುದು ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಶಿವಾನಂದ ಪಾಟೀಲ ಅವರು ರೈತರೆದುರು ಬಹಿರಂಗ ಕ್ಷಮೆಯಾಚಿಸಬೇಕು. ಹಾನಗಲ್ಲ, ಬ್ಯಾಡಗಿ, ಶಿಗ್ಗಾಂವಿ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಸೆ. 25ರಂದು ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮ ಬರಗಾಲ, ರೈತರ ಬೆಳೆ ಹಾನಿ ಕುರಿತಾದ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮವಾಗಿ ಪರಿವರ್ತನೆಯಾಗಬೇಕು. ಅದನ್ನು ಹೊರತುಪಡಿಸಿ ಬೇರಾವುದನ್ನೂ ರ್ಚಚಿಸಲು ಬಿಡುವುದಿಲ್ಲ ಎಂದರು.

ಬರಪೀಡಿತ ತಾಲೂಕು ಎಂದು ಘೊಷಣೆಯಾಗುವವರೆಗೆ ಯಾವುದೇ ಜನಪ್ರತಿನಿಧಿಗಳು ಸಭೆ-ಸಮಾರಂಭ, ಅಡಿಗಲ್ಲು, ಉದ್ಘಾಟನೆ ಸೇರಿದಂತೆ ಯಾವುದನ್ನೂ ಕೈಗೊಳ್ಳದಿರಲು ಮನವಿ ಮಾಡಿದ್ದೇವೆ. ಆದಾಗ್ಯೂ ಕೈಗೊಂಡರೆ ರೈತ ಸಂಘ ಅದಕ್ಕೆ ಪ್ರತ್ಯುತ್ತರ ನೀಡಲಾಗುವುದು ಎಂದರು.

ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಆತ್ಮಹತ್ಯೆಗೊಳಗಾದ ರೈತರ ಕುಟುಂಬದವರನ್ನು ಸಂರ್ಪಸಿ ಅಗತ್ಯ ದಾಖಲೆ ಪಡೆದು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು. ವಿಚಾರಣೆಗೆ ವಿಳಂಬ ಮಾಡದೇ ನೊಂದಿರುವ ಕುಟುಂಬದವರಿಗೆ ತಕ್ಷಣ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಸೋಮಣ್ಣ ಜಡೆಗೊಂಡರ, ರುದ್ರಪ್ಪ ಹಣ್ಣಿ, ಷಣ್ಮುಖ ಅಂದಲಗಿ, ಶ್ರೀಕಾಂತ ದುಂಡಣ್ಣನವರ, ಅಬ್ದುಲ್​ಖಾದರ ಮುಲ್ಲಾ, ಮಹಲಿಂಗಪ್ಪ ಅಕ್ಕಿವಳ್ಳಿ, ಅನಿಲ ಚಿಕ್ಕಾಂಶಿ, ಜಗದೀಶ ಭಂಗಿ, ಲೋಕೇಶ ಹುಲಿ, ಸಿದ್ದಣ್ಣ ಯಲ್ಲಾಪುರ, ಅಜ್ಜನಗೌಡ ಕರೇಗೌಡ್ರ, ಮೂಕಯ್ಯ ಗುರುಲಿಂಗಮ್ಮನವರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net