

ಮೈಸೂರು; ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಅತ್ತ ಸೋಮವಾರವಷ್ಟೇ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆಯಾಗಿದೆ.
ಬಾಲರಾಮನ ವಿಗ್ರಹವನ್ನು ಕೆತ್ತಲಾಗಿರುವ ಕೃಷ್ಣಶಿಲೆ ಸಿಕ್ಕಿದ ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಅದೇ ಸಂದರ್ಭದಲ್ಲಿ ಇತ್ತ ಶ್ರೀರಾಮಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಸದ ಪ್ರತಾಪಸಿಂಹ ಅವರಿಗೆ ದಲಿತ ಮುಖಂಡರು ಘೇರಾವ್ ಹಾಕಿ, ಧಿಕ್ಕಾರ ಕೂಗಿದರಲ್ಲದೆ, ಸ್ಥಳದಿಂದ ಅವರನ್ನು ವಾಪಸ್ ಕಳುಹಿಸಿದ ಪ್ರಸಂಗ ನಡೆದಿದೆ.
ಶಿಲೆ ಸಿಕ್ಕಿರುವ ದಲಿತ ಸಮುದಾಯದ ರಾಮದಾಸ್ ಎಂಬುವರ ಜಮೀನಿನಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸೋಮವಾರ ಬೆಳಗ್ಗೆ 7 ಗಂಟೆಗೆ ಭೂಮಿಪೂಜೆ ನಿಗದಿಯಾಗಿತ್ತು.
ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂಸದ ಪ್ರತಾಪಸಿಂಹ ಆಗಮಿಸಿದಾಗ, ‘ದಲಿತ ವಿರೋಧಿ ಹೇಳಿಕೆಗಳನ್ನು ನೀಡುವ ನೀವೇಕೆ ಇಲ್ಲಿಗೆ ಬಂದಿದ್ದೀರಿ’ ಎಂದು ಮುಖಂಡರು ಕಿಡಿಕಾರಿದರು. ಪೂಜಾ ಕಾರ್ಯಕ್ರಮಕ್ಕೆ ಬರದಂತೆ ಅವರನ್ನು ಅಡ್ಡಗಟ್ಟಿದರು. ಬಹುಸಂಖ್ಯೆಯಲ್ಲಿ ನೆರೆದಿದ್ದ ದಲಿತ ಮುಖಂಡರು ಪ್ರತಾಪಸಿಂಹ ಅವರಿಗೆ ಧಿಕ್ಕಾರ ಕೂಗಿದರು.
ಈ ವೇಳೆ ಜೆಡಿಎಸ್ ಮುಖಂಡ ಧನಗಳ್ಳಿ ಸ್ವಾಮಿ, ಕಾಂಗ್ರೆಸ್ ಮುಖಂಡ ಸುರೇಶ್ ಕುಮಾರ್ ಸೇರಿದಂತೆ ಹಲವರು, ‘ದಲಿತ ವಿರೋಧಿ ಸಂಸದರೇ, ದಲಿತರ ಜಮೀನಿನಲ್ಲಿ ನಡೆಯುವ ಪೂಜೆಗೆ ನೀವು ಬರಬಾರದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಮಹಿಷ ದಸರಾ ಆಯೋಜನೆ ಸಂದರ್ಭದಲ್ಲಿ ದಲಿತರನ್ನು ನಿಂದಿಸಿದ್ದೀರಿ. ಸಮಾಜದ ಸಾಮರಸ್ಯವನ್ನು ಹಾಳುಮಾಡುವ ನೀವು ದಲಿತರ ಜಮೀನಿನಲ್ಲಿ ಆಯೋಜಿಸಿರುವ ರಾಮನ ಪೂಜೆಯಲ್ಲಿ ಭಾಗವಹಿಸಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾರೋಹಳ್ಳಿ ಗ್ರಾಮದಲ್ಲಿ ಎಲ್ಲ ಜಾತಿ, ಜನಾಂಗದವರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಅದನ್ನು ಕದಡುವ ಕೆಲಸ ಮಾಡಬೇಡಿ ಎಂದು ತಾಕೀತು ಮಾಡಿದರು.
ಶಾಸಕರಾದ ಜಿ.ಟಿ ದೇವೇಗೌಡ, ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್ ಅವರು ದಲಿತ ಮುಖಂಡರನ್ನು ಮನವೊಲಿಸಲು ಮುಂದಾದರು. ಪೊಲೀಸರು ಸಹ ಸಮಾಧಾನಪಡಿಸಲು ಪ್ರಯತ್ನಿಸಿದ್ದರು.
ಆದರೆ ಅದಕ್ಕೆ ದಲಿತ ಮುಖಂಡರು ಜಗ್ಗಲಿಲ್ಲ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದ್ದರಿಂದ ಮರು ಮಾತನಾಡದ ಸಂಸದ ಪ್ರತಾಪಸಿಂಹ ಕಾರು ಹತ್ತಿ ಸ್ಥಳದಿಂದ ತೆರಳಿದರು. ಬಳಿಕ ಶ್ರೀರಾಮಮಂದಿರದ ಭೂಮಿಪೂಜೆ ಕಾರ್ಯಕ್ರಮ ನಿರಾತಂಕವಾಗಿ ನೆರವೇರಿತು.