ಘಟಪ್ರಭೆ ಒಡಲು ಭರ್ತಿ

Ghataprabha Odalu fill
Ghataprabha Odalu fill
Published on

ಮುಧೋಳ: ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆ ಜತೆಗೆ ಸ್ಥಳೀಯವಾಗಿ ಸುರಿಯುತ್ತಿರುವ ಮಳೆಗೆ ಘಟಪ್ರಭಾ ತುಂಬಿ ಹರಿಯುತ್ತಿದೆ. ಕಳೆದ ನಾಲ್ಕು ದಿನಗಳ ಹಿಂದೆ ಅಲ್ಪ ಪ್ರಮಾಣದಲ್ಲಿ ನೀರಿನ ಮಟ್ಟ ಹೆಚ್ಚಳ ಕಂಡು ಬಂದಿತ್ತು. ಸೋಮವಾರದಿಂದ ನೀರಿನ ಪ್ರಮಾಣ ಅಧಿಕವಾಗಿದ್ದು, ನದಿ ತೀರದ ಜನತೆಗೆ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.

ಬೇಸಿಗೆಯಲ್ಲಿ ಹಿಡಕಲ್ ಜಲಾಶಯದಿಂದ ಕಾಲುವೆ ಹಾಗೂ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗಿತ್ತು. ಈ ನೀರಿನ ಜತೆಗೆ ಈಗ ಮಳೆ ನೀರು ಸೇರಿ ಘಟಪ್ರಭೆ ತುಂಬಿ ಹರಿಯುತ್ತಿದೆ.

ಜಿಲ್ಲೆಯಲ್ಲಿಯ ವರ್ಷಧಾರೆ ಜತೆಗೆ ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆ ಇದೆ. ನದಿ ದಡದಲ್ಲಿನ ಕೃಷಿ ಪಂಪ್‌ಸೆಟ್‌ಗಳನ್ನು ಈಗಾಗಲೇ ಬೇರೆ ಕಡೆಗೆ ಸಾಗಿಸುವ ಕಾರ್ಯ ಸಹ ನಡೆದಿದೆ.

ಬ್ಯಾರೇಜ್‌ಗಳ ಮೇಲೆ ನೀರು: ಮುಧೋಳ ತಾಲೂಕಿನಲ್ಲಿ ಹಲವಾರು ಬ್ಯಾರೇಜ್‌ಗಳ ಮೇಲೆ ನೀರು ಹರಿಯುತ್ತಿದೆ. ಮುಧೋಳದ ಸಿದ್ಧೇಶ್ವರ ಬ್ಯಾರೇಜ್, ಢವಳೇಶ್ವರ ಬ್ರಿಜ್ ಕಂ ಬ್ಯಾರೇಜ್‌ನಿಂದ ಆಲಗುಂಡಿ ಬ್ರಿಜ್ ಕಂ ಬ್ಯಾರೇಜ್‌ವರೆಗೂ ನದಿ ತುಂಬಿ ಹರಿಯುತ್ತಿದೆ. ನೀರು ಹೀಗೆ ಹೆಚ್ಚಾದರೆ ಚನ್ನಾಳ, ಒಂಟಗೋಡಿ, ಜೀರಗಾಳ, ಚಿಚಖಂಡಿ, ಜಂಬಗಿ, ಮಾಚಕನೂರ, ಜಾಲಿಬೇರ ಬ್ರಿಜ್ ಕಂ ಬ್ಯಾರೇಜ್ ಮೇಲೂ ನೀರು ಹರಿಯುವ ಭೀತಿ ಎದುರಾಗಿದೆ.

ಜನರ ಹಿಡಿಶಾಪ: ಪ್ರವಾಹಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಎಡವುತ್ತಿರುವ ಆಡಳಿತದ ವಿರುದ್ಧ ಮತ್ತೆ ನದಿ ತೀರದ ಜನರು ಹಿಡಿಶಾಪ ಹಾಕುವಂತಾಗಿದೆ. ಕಳೆದ ಬಾರಿ ಸುರಿದ ಮಳೆಯಿಂದ ಘಟಪ್ರಭಾ ನದಿಯಲ್ಲಿ 51 ಸಾವಿರ ಕ್ಯೂಸೆಕ್‌ಗೂ ಹೆಚ್ಚಿನ ಹೊರ ಹರಿವು ಉಂಟಾಗಿತ್ತು. ಪರಿಣಾಮ ನದಿ ತೀರದ ಗ್ರಾಮಗಳು ತೀವ್ರ ಸಂಕಷ್ಟಕ್ಕೊಳಗಾಗಿದ್ದವು. ಪ್ರವಾಹ ಪೂರ್ವ ಸಭೆ ನಡೆಸಿದ್ದ ಅಧಿಕಾರಿಗಳು ಪ್ರವಾಹ ತಗ್ಗಿಸಲು ಹಾಕಿಕೊಂಡ ಯೋಜನೆ ಇದುವರೆಗೂ ಕಾರ್ಯರೂಪಕ್ಕೆ ಬಾರದೆ ಈ ಬಾರಿಯೂ ಪ್ರವಾಹಕ್ಕೆ ತುತ್ತಾಗುವ ಭೀತಿ ಉಂಟಾಗಿದೆ. ಮುಧೋಳ-ಯಾದವಾಡ ಸೇತುವೆ ಎತ್ತರ ಹೆಚ್ಚಳ ಮಾಡಿದರೆ ಮಾತ್ರ ಶಾಶ್ವತ ಪರಿಹಾರ ಸಾಧ್ಯ ಎಂಬುದು ಸ್ಥಳೀಯರ ವಾದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net