ಪ್ರಸ್ತುತ ವಿದ್ಯಮಾನ ಗ್ರಹಿಸದಿದ್ದರೆ ಜೀವನ ಕವಲುದಾರಿ

dj dvg book release
Published on

ದಾವಣಗೆರೆ: ಸಾಹಿತ್ಯದ ಮೂಲಕ ಜಗತ್ತನ್ನು ಅರ್ಥ ಮಾಡಿಕೊಳ್ಳುತ್ತೇವೆ ಎನ್ನುವವರು ಪ್ರಚಲಿತ ವಿದ್ಯಮಾನದ ಬಗ್ಗೆ ತಿಳಿಯದಿದ್ದರೆ ಜೀವನ ಕವಲು ದಾರಿಯಂತಾಗಲಿದೆ ಎಂದು ಹಿರಿಯ ಲೇಖಕ, ಸಾಹಿತಿ ಡಾ.ಆನಂದ ಋಗ್ವೇದಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಬೆಂಗಳೂರಿನ ಅಂಕಿತ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ ಲೇಖಕ ಸತೀಶ್ ಚಪ್ಪರಿಕೆ

ಅವರ ಘಾಂದ್ರುಕ್ ಕಾದಂಬರಿಯ ಕುರಿತ ಸಂವಾದದಲ್ಲಿ ಮಾತನಾಡಿ, ಯಶಸ್ವಿ ಬದುಕಿಗೆ ಯಾವ ವಿಷಯಗಳ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಕಥಾವಸ್ತುವಾಗಿದೆ ಎಂದರು.

ಜಾಗತಿಕ ನೆಲೆಯಲ್ಲಿನ ಧಾರ್ಮಿಕ ಹಾಗೂ ರಾಜಕೀಯ ಪಲ್ಲಟಗಳನ್ನು ಘಾಂದ್ರುಕ್ ಕಾದಂಬರಿ ಅದ್ಭುತವಾಗಿ ಅನಾವರಣಗೊಳಿಸಿದೆ. ಹೆಸರಾಂತ ಸಾಹಿತಿಗಳ ಕಾದಂಬರಿಗಳಿಗೆ ನಿಲುಗಡೆ ಎನ್ನುವ ಅಂಶವಿದೆ.

ಆದರೆ ಇದರಲ್ಲಿನ ವಿಷಯ ನಿರಂತರವಾಗಿದ್ದು, ಸಾಹಿತ್ಯ ಲೋಕದಲ್ಲಿ ಹೊಸ ಪರಂಪರೆಯನ್ನು ಹುಟ್ಟುಹಾಕುವ ವಿಶ್ವಾಸವಿದೆ ಎಂದು ತಿಳಿಸಿದರು.

ದಕ್ಷಿಣ ಅಮೆರಿಕಾದಿಂದ ಮಯನ್ಮಾರ್, ನೇಪಾಳದಿಂದ ಕುಂದಾಪುರದ ಚಪ್ಪರಿಕೆವರೆಗಿನ ಪಯಣದ ಅನುಭವವನ್ನು ಕೃತಿ ನೀಡಲಿದೆ. ಹೊಸ ದಿಕ್ಕು ತೋರಿಸುವ ದಿಕ್ಸೂಚಿ ಇದಾಗಿದೆ ಎಂದು ಬಣ್ಣಿಸಿದರು.

ಸಂವಾದದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದ ಲೇಖಕ ಸತೀಶ್ ಚಪ್ಪರಿಕೆ, ಪ್ರಸ್ತುತ ದಿನಗಳಲ್ಲಿ ಧರ್ಮ, ಯುದ್ಧ, ಮಾದಕ ವ್ಯಸನ, ಮಕ್ಕಳ ಕಳ್ಳಸಾಗಣೆ ಹಾಗೂ ಶಸ್ತ್ರಾಸ್ತ್ರ ತಯಾರಿಕೆ ಬಹುದೊಡ್ಡ ಉದ್ಯಮಗಳಾಗಿವೆ.

ಅಮೆರಿಕಾ ಸೇರಿದಂತೆ ಬಲಿಷ್ಠ ರಾಷ್ಟ್ರಗಳೆಲ್ಲವೂ ಈ ಉದ್ಯಮಗಳಿಂದಲೇ ಇತರ ದೇಶಗಳನ್ನು ನಿಯಂತ್ರಿಸುತ್ತಿವೆ ಎಂದರು. ಈ ಮಾಯಾ ಜಾಲದಲ್ಲಿ ಬಡವರು ಮತ್ತು ಮಕ್ಕಳೇ ಸಂಕಷ್ಟಕ್ಕೆ ತುತ್ತಾಗುತ್ತಾರೆ.

ಆದ್ದರಿಂದ ಯುದ್ಧಪೀಡಿತ ದೇಶಗಳಲ್ಲಿ ಯುದ್ಧದ ಕ್ರೌರ್ಯದಿಂದ ಅನಾಥರಾಗುವ ಎರಡೂ ದೇಶಗಳ ಮಕ್ಕಳ ರಕ್ಷಣೆಗೆ ಕೆಲಸ ಮಾಡಬೇಕೆಂಬ ಆಶಯವನ್ನು ಕಾದಂಬರಿಯಲ್ಲಿ ಸೂಫಿಯಾ ಪಾತ್ರದ ಮೂಲಕ ಹೇಳಿಸಲಾಗಿದೆ ಎಂದರು.

‘ಘಾಂದ್ರುಕ್’ ಎಂಬುದು ನೇಪಾಳದಲ್ಲಿನ ನಾಗರಿಕತೆಯ ಸ್ಪರ್ಶವೇ ಇಲ್ಲದ ಒಂದು ಸುಂದರ ಕುಗ್ರಾಮ. ಈ ಹಳ್ಳಿಯಿಂದ ಹಿಮಾಲಯದ ಶ್ರೇಣಿಗಳನ್ನು ಕಾಣಬಹುದು.

ನನ್ನ ಹೃದಯಕ್ಕೆ ಹತ್ತಿರವಾದ ಹಳ್ಳಿಯಾಗಿದ್ದರಿಂದ ಕಾದಂಬರಿಗೆ ಈ ಹೆಸರನ್ನೇ ಇಡಲಾಗಿದೆ. ನನ್ನ ನಿಲುವುಗಳೇ ಕಾದಂಬರಿಯಲ್ಲಿ ವ್ಯಕ್ತವಾಗಿವೆ.

ಜಾತ್ಯತೀತತೆ, ಸಮಾನತೆ ಒತ್ತಿ ಹೇಳಲು ಕಾದಂಬರಿಯ ನಾಯಕನಿಗೆ ಸಿದ್ಧಾರ್ಥ ಎಂದು ಹೆಸರಿಡಲಾಗಿದೆ ಎಂದು ವಿವರಿಸಿದರು.

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಪ್ರಾಸ್ತಾವಿಕ ಮಾತನಾಡಿ, ಘಾಂದ್ರುಕ್ ಕಾದಂಬರಿ ಬಿಡುಗಡೆಯಾಗಿ ಕೇವಲ ಮೂರು ತಿಂಗಳಲ್ಲಿಯೇ 2 ನೇ ಆವೃತ್ತಿ ಕಂಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸುತ್ತಿದೆ.

ಪ್ರಸ್ತುತ ಸಮಾಜದಲ್ಲಿ ಧರ್ಮ ಹೆಚ್ಚು ಚರ್ಚಿತ ವಿಷಯವಾಗಿದೆ. ಇಂಡಿಯಾದ್ದೇ ಬೇರೆ, ಭಾರತದ್ದೇ ಬೇರೆ ಧರ್ಮ ಎನ್ನುವಂತಾಗಿದೆ ಎಂದರು.

ಜಗತ್ತಿಗೆ ಒಳ್ಳೆಯದನ್ನು ಮಾಡುವುದೇ ಧರ್ಮವಾಗಿದೆ ಎಂದು ಕಾದಂಬರಿ ಪ್ರಸ್ತುತ ಪಡಿಸಿದೆ.

ಇರುವುದೆಲ್ಲವನ್ನು ಬಿಟ್ಟು, ತನ್ನನ್ನು ತಾನು ಹುಡುಕಿಕೊಂಡು ಹೋಗುವ ನಾಯಕ ಪ್ರೀತಿಯಲ್ಲಿ ಬೀಳುವುದು ಕಾದಂಬರಿಯ ವಿಷಯವಾಗಿದೆ ಎಂದು ತಿಳಿಸಿದರು.

ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಕಾವ್ಯಶ್ರೀ ನಿರೂಪಿಸಿದರು. ಮಯೂರ್ ಹಾಗೂ ಸಂತೋಷ್ ಪ್ರಾರ್ಥಿಸಿದರು.

ಕಾಲೇಜಿನ ಪ್ರಾಚಾರ್ಯ ಎಂ.ಮಂಜಣ್ಣ, ಉಪನ್ಯಾಸಕ ಡಾ.ಭೀಮಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net