

ಮದ್ದೂರು: ತಾಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟದ (ಕೆಎಂಎಫ್) ಮುಂಭಾಗದಿಂದ ಬಸವನಪುರ ಗ್ರಾಮಕ್ಕೆ ತಿರುಗಾಡಲು ರಸ್ತೆ ನಿರ್ಮಿಸಬೇಕು ಮತ್ತು ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಲಿತ ಹಕ್ಕುಗಳ ಸಮಿತಿಯ ಪದಾಧಿಕಾರಿಗಳು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು.
ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಆರ್.ಕೃಷ್ಣ ಮಾತನಾಡಿ, ಗೆಜ್ಜಲಗೆರೆ ಕೆಎಂಎಫ್ ಡೇರಿ ಮುಂಭಾಗದಿಂದ ಬಸವನಪುರಕ್ಕೆ ಹೋಗಲು ಸುಮಾರು 25 ವರ್ಷದಿಂದ ತಿರುಗಾಡಲು ರಸ್ತೆ ಇಲ್ಲದಾಗಿದೆ. ಇದರಿಂದ ಇಲ್ಲಿ ವಾಸವಿರುವ ಸುಮಾರು 500 ಕುಟುಂಬಗಳಿಗೆ ಸಂಚರಿಸಲು ತುಂಬ ತೊಂದರೆಯಾಗುತ್ತಿದೆ ಎಂದು ದೂರಿದರು.
ಗ್ರಾಮದಲ್ಲಿ ಸ್ಮಶಾನ ಸೇರಿದಂತೆ ಯಾವುದೇ ಮೂಲ ಸೌಕರ್ಯ ಇಲ್ಲ. ಈ ಸಂಬಂಧ ಹಲವು ಬಾರಿ ಗ್ರಾಪಂ, ತಾಪಂ, ಜಿಪಂ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಆಗಮಿಸಿ, ನಾನು ಈಗಾಗಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶೀಘ್ರವೇ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ದಲಿತ ಹಕ್ಕುಗಳ ಸಮಿತಿಯ ತಾಲೂಕು ಅಧ್ಯಕ್ಷ ವಿಜೇಂದ್ರ, ಕಾರ್ಯದರ್ಶಿ ಮಹೇಶ್, ಖಜಾಂಚಿ ಶಿವಲಿಂಗಯ್ಯ, ಬಸವನಪುರ ನಿವಾಸಿಗಳಾದ ಸತ್ಯ, ನಾಗಮ್ಮ, ಪುಷ್ಪ, ಸರಸ್ವತಿ, ಲಕ್ಷ್ಮಮ್ಮ, ಲಲಿತಾ, ಪುಟ್ಟಗೌರಮ್ಮ, ಜಯಮ್ಮ, ಸೌಮ್ಯಾ, ರತ್ನಮ್ಮ ಇತರರು ಇದ್ದರು.