ಹೋರಾಟ ನಡೆಸಿದವರಿಗೆ ಬೆದರಿಕೆ: ಕ್ರಮಕ್ಕೆ ಒತ್ತಾಯಿಸಿ ಗೆಜ್ಜಲಗೆರೆ ಕಾಲನಿ ನಿವಾಸಿಗಳ ಪ್ರತಿಭಟನೆ

1 (4)
Published on

ಮಂಡ್ಯ: ಮದ್ದೂರು ತಾಲೂಕು ಗೆಜ್ಜಲಗೆರೆ ಗ್ರಾಮದಲ್ಲಿ ಸ್ಮಶಾನ ಜಾಗ ಉಳಿಸಿಕೊಳ್ಳಲು ಹೋರಾಟ ನಡೆಸಿರುವ ಮುಖಂಡರನ್ನು ನಿಂದಿಸಿ ಬೆದರಿಕೆ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಮಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಗೆಜ್ಜಲಗೆರೆ ಕಾಲನಿ ನಿವಾಸಿಗಳು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮುಖಂಡ ಜಿ.ಪಿ.ಶಿವಲಿಂಗಯ್ಯ ಮಾತನಾಡಿ, ಗೆಜ್ಜಲಗೆರೆ ಕಾಲನಿಯಲ್ಲಿನ ಸಾರ್ವಜನಿಕ ಸ್ಮಶಾನವನ್ನು ಕಬಳಿಸಲು ಜಿ.ಎಲ್.ಅಶೋಕ, ಜಿ.ಪಿ.ಸತೀಶ್, ಜಿ.ಎಲ್.ಹರೀಶ, ಆದಿಪ್ರಸಾದ್, ಎಚ್.ಎಂ.ನಾಗರಾಜು ಅವರು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ವೆ ನಂ.203 ಸ್ಮಶಾನದ ಬಗ್ಗೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಸ.ನಂ.139ರ ಸರ್ಕಾರಿ ಕಟ್ಟೆ ಜಾಗ ಉಳಿಸುವ ಬಗ್ಗೆ ತಹಸೀಲ್ದಾರ್‌ರಿಗೆ ಮನವಿ ಮಾಡಲಾಗಿದೆ. ಈ ಎರಡೂ ಜಾಗ ಕಬಳಿಸಲು ಮುಂದಾಗಿರುವ ಎಚ್.ಎಂ.ನಾಗರಾಜು ತಮ್ಮ ಬೆಂಬಲಿಗರೊಂದಿಗೆ ಬೆದರಿಕೆ ಹಾಕಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ದೂರಿದರು.

ಆ.23ರಂದು ಜಾಗ ಉಳಿಸಲು ಹೋರಾಡುತ್ತಿರುವ ಜಿ.ಪಿ.ಶಿವಲಿಂಗಯ್ಯ, ಮಂಜುನಾಥ್, ಜಯ ವೀರೇಗೌಡರಿಗೆ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಗ್ರಾಮದ ಮುಖಂಡರು ಮತ್ತು ಜನತೆಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಜಿ.ಪಿ.ಶಿವಲಿಂಗಯ್ಯ, ಜಿ.ಎನ್.ಮಂಜುನಾಥ್, ದೇವರಾಜ್, ಜಯವೀರೇಗೌಡ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net