ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿ

16 june tnp 01
ತಿ.ನರಸೀಪುರ ತಾಲೂಕಿನ ಸುನೀಲ್ ಬೋಸ್ ಯುವ ಬ್ರಿಗೇಡ್ ಹಾಗೂ ರಾಷ್ಟ್ರೀಯ ಅಹಿಂದ ಒಕ್ಕೂಟ ಸಂಘಟನೆಯ ಕಾರ್ಯಕರ್ತರು ಬೆಂಗಳೂರು ಗೃಹ ಕಚೇರಿಯಲ್ಲಿ ಸಂಸದ ಸುನೀಲ್ ಬೋಸ್ ಅವರನ್ನು ಭೇಟಿಯಾಗಿ ಸಂಘಟನೆಗಳ ಕಾರ್ಯ ಚಟುವಟಿಕೆಯ ಬಗ್ಗೆ ಸಮಲೋಚನೆ ನಡೆಸಿದರು. ಕುಮಾರ್ ರಾಮೇಗೌಡ, ಸೋಸಲೆ ದೇವರಾಜ್, ಬೆನಕನಹಳ್ಳಿ ಅರುಣ, ತಲಕಾಡು ಆನಂದ್, ವಾಟಾಳ್ ಚಿನ್ನಸ್ವಾಮಿ, ಕೇತಹಳ್ಳಿ ಹರೀಶ್ ಇತರರು ಇದ್ದರು.
Published on

ತಿ.ನರಸೀಪುರ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು. ಪಕ್ಷದ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಯುವಕರು ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುವ ಮೂಲಕ ಚುನಾವಣೆಗೆ ಸಜ್ಜಾಗಬೇಕು ಎಂದು ಸಂಸದ ಸುನೀಲ್ ಬೋಸ್ ಸಲಹೆ ನೀಡಿದ್ದಾರೆ.

ತಾಲೂಕಿನ ಸುನೀಲ್ ಬೋಸ್ ಯುವ ಬ್ರಿಗೇಡ್ ಅಧ್ಯಕ್ಷ ಕನ್ನಾಯಕನಹಳ್ಳಿ ಕುಮಾರ್ ರಾಮೇಗೌಡ ನೇತೃತ್ವದಲ್ಲಿ ಬೆಂಗಳೂರಿನ ಗೃಹ ಕಚೇರಿಯಲ್ಲಿ ಇತ್ತೀಚೆಗೆ ಭೇಟಿಯಾದ ಯುವ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಯುವ ಬ್ರಿಗೇಡ್ ಹಾಗೂ ರಾಷ್ಟ್ರೀಯ ಅಹಿಂದ ಒಕ್ಕೂಟ ಸಂಘಟನೆಯ ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಅಹಿಂದ ವರ್ಗಗಳನ್ನು ಒಗ್ಗಟ್ಟಾಗಿ ಕೊಂಡೊಯ್ಯಬೇಕು. ಯಾವುದೇ ಸಮುದಾಯವನ್ನು ಕಡೆಗಣಿಸದೆ ಎಲ್ಲರ ವಿಶ್ವಾಸ ಗಳಿಸಬೇಕು. ಕಳೆದೆರಡು ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದಿರುವ ಯುವಕರ ತಂಡಕ್ಕೆ ಸಹಕಾರ ನೀಡುತ್ತೇನೆ. ನಿಮ್ಮ ಜತೆ ನಿರಂತರವಾಗಿರುತ್ತೇನೆ ಎಂದು ಅಭಯ ನೀಡಿದರು.

ಸುನೀಲ್ ಬೋಸ್ ಯುವ ಬ್ರಿಗೇಡ್ ತಂಡದ ಪದಾಧಿಕಾರಿಗಳು ಹಾಗೂ ಅಹಿಂದ ಒಕ್ಕೂಟದ ಸದಸ್ಯರು ಎಲ್ಲ ಕ್ಷೇತ್ರಗಳಲ್ಲಿಯೂ ಉತ್ತಮ ಹೆಸರು ಗಳಿಸಿದ್ದು, ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದೀರಿ. ವರ್ಷಾಂತ್ಯದೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ. ಯುವಕರಿಗೆ ಆದ್ಯತೆ ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಒಲವು ವ್ಯಕ್ತಪಡಿಸಿದ್ದಾರೆ. ನಮ್ಮ ಹೆಸರಿನ ಸಂಘಟನೆಯನ್ನು ಪ್ರಬಲವಾಗಿ ಸಂಘಟಿಸಿ ಗುರುತಿಸಿಕೊಂಡಿರುವ ಯುವಕರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕೆಂಬ ಕಾಳಜಿಯು ನಮ್ಮಲ್ಲಿದೆ. ಹಾಗಾಗಿ ಹೆಚ್ಚಿನ ಯುವಕರಿಗೆ ಅವಕಾಶ ನೀಡಲಾಗುವುದು ಎಂದು ಭರಸವಸೆ ನೀಡಿದರು.

ಬ್ರಿಗೇಡ್ ಅಧ್ಯಕ್ಷ ಹಾಗೂ ರಾಷ್ಟ್ರೀಯ ಅಹಿಂದ ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕನ್ನಾಯಕನಹಳ್ಳಿ ಕುಮಾರ್, ತಾಲೂಕು ಅಧ್ಯಕ್ಷ ಸೋಸಲೆ ದೇವರಾಜ್, ಸಂಘಟನಾ ಕಾರ್ಯದರ್ಶಿ ಬೆನಕನಹಳ್ಳಿ ಅರುಣ, ತಾಲೂಕು ಯುವ ವೇದಿಕೆ ಮುಖಂಡ ತಲಕಾಡು ಆನಂದ್, ಸಂಚಾಲಕರಾದ ವಾಟಾಳ್ ಚಿನ್ನಸ್ವಾಮಿ, ಕೇತಹಳ್ಳಿ ಹರೀಶ್, ದೊಡ್ಡಪುರ ಚರಣ್, ತಲಕಾಡು ಭರತ್‌ರಾಜ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಮಹದೇವಪ್ರಭು, ದಲಿತ ಮುಖಂಡ ಸಂದೀಪ್, ಬನ್ನೂರು ಅಶೋಕ್‌ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net