

ದೇವದುರ್ಗ: ಬದುಕಿನ ಜಂಜಾಟದಲ್ಲಿ ದುಡಿಯುವ ಬಹುತೇಕ ಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿವಹಿಸಲ್ಲ. ನಿರ್ಲಕ್ಷ್ಯ ಮಾಡದೆ ಸಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು ಎಂದು ಪಿಎಚ್‌ಸಿ ವೈದ್ಯಾಧಿಕಾರಿ ಸಿದ್ದರಾಮೇಶ ಹೇಳಿದರು.
ತಾಲೂಕಿನ ಕಾಕರಗಲ್ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರದಲ್ಲಿ ಶನಿವಾರ ಮಾತನಾಡಿದರು. ಅಸಂಕ್ರಾಮಿಕ ಕಾಯಿಲೆಗಳು ಅತಿಹೆಚ್ಚಾಗಿ ಕಾಡುತ್ತಿದ್ದು 30 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಸಾಂಕ್ರಾಮಿಕ ರೋಗಗಳಾದ ಕ್ಷಯ, ಡೆಂಘೆ, ಮಲೇರಿಯಾ, ಚಿಕೂನ್‌ಗುನ್ಯಾ, ಎಚ್‌ಐವಿ, ಹದಿಹರೆಯದವರ ಆರೋಗ್ಯ ಸಮಸ್ಯೆ ಬಗ್ಗೆ ತಿಳಿವಳಿಕೆ ಅಗತ್ಯ ಎಂದರು.
ಕ್ಷಯರೋಗ ಮೇಲ್ವಿಚಾರಕ ರವಿ ಶುಕ್ಲಾ ಮಾತನಾಡಿ, ಎಲ್ಲ ಕಾರ್ಮಿಕರು ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ಬಗ್ಗೆ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯಬೇಕು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಜ್ವರಬರುವುದು, ಕಫದಲ್ಲಿ ರಕ್ತ ಬರುವುದು, ತೂಕ ಕಡಿಮೆ ಆಗುವುದು, ಹಸಿವಾಗದೆ ಇರುವುದು ಕ್ಷಯರೋಗದ ಲಕ್ಷಣಗಳಾಗಿವೆ. ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆಯಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಬಸಮ್ಮ, ಕಾರ್ಯದರ್ಶಿ ರವಿಚಂದ್ರ, ಹಿರಿಯ ಆರೋಗ್ಯ ಮೇಲ್ವಿಚಾರಕ ಹನುಮಂತ ಹೂಗಾರ, ಕ್ಷಯ ರೋಗ ಮೇಲ್ವಿಚಾರಕರಾದ ಮಹೇಶ ನಾಯಕ್, ಭೀಮೇಶ್, ಆಪ್ತ ಸಮಾಲೋಚಕ ನಂದಕುಮಾರ, ಜೀವನ್, ವಿಶ್ವನಾಥ್, ಮುದಿಯಪ್ಪ, ಸಿದ್ದಣ್ಣ, ಸಮುದಾಯ ಆರೋಗ್ಯ ಅಧಿಕಾರಿ ಅಭಿಜಿತ್, ಆರೋಗ್ಯ ನಿರೀಕ್ಷಣಾಧಿಕಾರಿ ರಾಮಕೃಷ್ಣ, ಬಸವರಾಜ ಕಳ್ಳಿಮಠ, ಆನಂದಕುಮಾರ ಇದ್ದರು.