

ಆಲೂರು : ಸ್ವಾತಂತ್ರೃ ಬಂದು 75ವರ್ಷ ಕಳೆದರೂ ಕಂದಾಯ ಇಲಾಖೆಯಿಂದ ರೈತರಿಗೆ ಸೂಕ್ತ ದಾಖಲೆಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ತಾಲೂಕಿನಲ್ಲಿ ಸುಮಾರು 15 ಸಾವಿರಕ್ಕಿಂತ ಹೆಚ್ಚು ಪೌತಿ ಖಾತೆ ಅರ್ಜಿಗಳು ವಿಲೇವಾರಿಯಾಗಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ಮಿನಿ ವಿದಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸಿರುವುದು ಸಂತಸಕರವಾಗಿದೆ. ಡಿಜಿಟಲ್ ಸೇವೆ ಕಾಲದಲ್ಲಿದ್ದರೂ ರೈತರಿಗೆ ಸೂಕ್ತ ದಾಖಲೆಗಳಾದ ದುರಸ್ತಿ, ಪೋಡು ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಒದಗಿಸಲು ಸಾಧ್ಯವಾಗದಿರುವುದರಿಂದ ಜೀವನವಿಡಿ ಕಂದಾಯ ಇಲಾಖೆಗೆ ಅಲೆದಾಡಿ ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಬ್ಯಾಂಕಿನಿಂದ ಯಾವುದೇ ಸಾಲ, ಇನ್ನಿತರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಯಾವುದೇ ರೈತ ಕಚೇರಿಗೆ ಬಂದು ಮನವಿ ಸಲ್ಲಿಸಿದಾಗ ಪಾರದರ್ಶಕವಾಗಿ ಸೂಕ್ತ ಸಮಯದಲ್ಲಿ ದಾಖಲೆಗಳನ್ನು ಒದಗಿಸಬೇಕು. ಸೂಕ್ತ ಸಮಯದಲ್ಲಿ ರೈತರ ಕೆಲಸಗಳಾದರೆ ಕೃಷಿಯಲ್ಲಿ ಇಮ್ಮಡಿಯಾಗಿ ಲಾಭ ಗಳಿಸುತ್ತಾರೆ ಎಂಬ ವಿಶ್ವಾಸವಿದೆ. ಇತ್ತೀಚೆಗೆ ಕಂದಾಯ ಇಲಾಖೆ ಉತ್ತಮ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂದಿಗೂ ಅನಕ್ಷರಸ್ಥರಿದ್ದಾರೆ. ಕಚೇರಿಗೆ ಬರುವ ಎಲ್ಲರಿಗೂ ಗೌರವದಿಂದ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರೆ ಶೇ. 50 ರಷ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡಬಾರದು. ಆತ್ಮತೃಪ್ತಿಗಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮದ್ಯವರ್ತಿಗೆ ಅವಕಾಶವಿಲ್ಲ: ತಹಸೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ, ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಮದ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ. ರೈತರು ತಮ್ಮ ಕೆಸಲಕ್ಕೆ ನೇರವಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ. ಸ್ಪಂದಿಸದಿದ್ದರೆ ನನ್ನನ್ನು ನೇರವಾಗಿ ಭೇಟಿ ಮಾಡಬೇಕು. ಪಾರದರ್ಶಕವಾಗಿ ಕೆಲಸ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪಹಣಿಯನ್ನು ಆಧಾರ್‌ಕಾರ್ಡಿಗೆ ಲಿಂಕ್ ಮಾಡಬೇಕು. ತಾಲೂಕಿನಲ್ಲಿ 15,810 ರೈತರ ಪಹಣಿ ಲಿಂಕ್ ಆಗಿಲ್ಲ. ಮುಂದಿನ ಮೂರು ತಿಂಗಳಿನಲ್ಲಿ ಹೋಬಳಿ ಮಟ್ಟದಲ್ಲಿ ಪೌತಿ ಖಾತೆ ಆಂದೋಲನದ ಮೂಲಕ ಖಾತೆ ಮಾಡಿಕೊಡಲಾಗುವುದು. ಪೂರ್ವಜರು ಮರಣ ಪ್ರಮಾಣಪತ್ರವಿಲ್ಲದಿದ್ದರೆ ನೇರವಾಗಿ ನ್ಯಾಯಾಲಯದ ಮೂಲಕ ಮರಣ ದೃಢೀಕರಣ ಪತ್ರ ನೀಡಿದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಕೆಲ ರೈತರು ತಮ್ಮ ಸಮಸ್ಯೆಗಳನ್ನು ಅನಾವರಣಗೊಳಿಸಿದರು. ಕಸಬಾ ಹೋಬಳಿಯಲ್ಲಿ ಸುಮಾರು 50 ಕ್ಕೂ ಹೆಚ್ಚು ಅರ್ಜಿಗಳು ದಾಖಲಾದವು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೆರಾಬೇಗಂ, ಶಿರಸ್ತೆದಾರ್ ಅಂಕೆಗೌಡ, ಕಂದಾಯ ನಿರೀಕ್ಷಕ ಜ್ಞಾನೇಂದ್ರ, ಗ್ರಾಮ ಆಡಳಿತ ಅಧಿಕಾರಿಗಳಾದ ರವಿನಾಯಕ್, ಚಂದ್ರಶೇಖರ್, ಸಂಜೀವ್, ಮಹೇಶ್ ಮತ್ತು ಕಸಬಾ ಹೋಬಳಿ ಗ್ರಾಮ ಸಹಾಯಕರು ಇದ್ದರು.