ತಂಬಾಕಿಗೆ ಉತ್ತಮ ದರ ದೊರಕಿಸಿಕೊಡಿ

HUN-DEC-21-3(TOBACCO BOARD MEMBERS)
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ತಂಬಾಕು ಮಂಡಳಿ ಸದಸ್ಯರ ನಿಯೋಗ ನವದೆಹಲಿಯಲ್ಲಿ ಭೇಟಿ ಮಾಡಿ ತಂಬಾಕು ಬೆಲೆ ಕುಸಿತ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದರು. ಎಚ್.ಸಿ.ಬಸವರಾಜ್, ವಿಕ್ರಂ ರಾಜೇಗೌಡ, ದಿನೇಶ್ ಇದ್ದರು.
Published on

ಹುಣಸೂರು: ಪ್ರಸ್ತುತ ಸಾಲಿನಲ್ಲಿ ತಂಬಾಕಿಗೆ ಸೂಕ್ತ ದರ ಸಿಗದಿರುವ ಕುರಿತು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಮಾಡಿ ಉತ್ತಮ ದರ ದೊರಕುವಂತೆ ಮಾಡಲು ಮನವಿ ಸಲ್ಲಿಸಲಾಗಿದೆ ಎಂದು ತಂಬಾಕು ಮಂಡಳಿ ಸದಸ್ಯ ಎಚ್.ಸಿ.ಬಸವರಾಜ್ ಹೇಳಿದರು.

ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಕಳೆದ ಗುರುವಾರ ನವದೆಹಲಿಯಲ್ಲಿ ಸಚಿವರನ್ನು ತಂಬಾಕು ಮಂಡಳಿ ಸದಸ್ಯರಾದ ವಿಕ್ರಂ ರಾಜೇಗೌಡ, ದಿನೇಶ್ ಅವರನ್ನೊಳಗೊಂಡ ನಿಯೋಗ ಭೇಟಿ ಮಾಡಿ ತಂಬಾಕು ಬೆಳೆಯುವ ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ವಿವರಿಸಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮುಕ್ತಾಯವಾದ ಆಂಧ್ರಪ್ರದೇಶದ ತಂಬಾಕು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜೆ.ಗೆ 300ರೂ.ಗೂ ಹೆಚ್ಚು ನೀಡಲಾಗಿದೆ. ರಾಜ್ಯದ ಉತ್ತಮ ಗುಣಮಟ್ಟದ ತಂಬಾಕಿಗೆ 295 ರೂ.ಆಸುಪಾಸು ನೀಡಲಾಗುತ್ತಿದೆ. ಈ ಸಾಲಿನಲ್ಲಿ ಅತಿಯಾದ ಮಳೆಯಿಂದಾಗಿ ತಂಬಾಕು ಇಳುವರಿ ಕುಸಿತ ಮತ್ತು ಗುಣಮಟ್ಟ ಕ್ಷೀಣಿಸಿದ್ದು, ಮೂರು ಮತ್ತು ನಾಲ್ಕನೇ ಗ್ರೇಡ್ ತಂಬಾಕು ಹೆಚ್ಚಾಗಿರುವುದರಿಂದ ಈ ವಿಭಾಗದ ತಂಬಾಕಿಗೆ ವೈಜ್ಞಾನಿಕ ದರ ಬೇಕಾಗಿದೆ ಎಂದು ಮನವರಿಕೆ ಮಾಡಲಾಗಿದೆ ಎಂದರು.

ಸಂಸದರಾಗಿದ್ದ ಪ್ರತಾಪಸಿಂಹ ಅವರ ಪ್ರಯತ್ನದ ಫಲದಿಂದಾಗಿ ಮೈಸೂರು-ಕುಶಾಲನಗರ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅನುದಾನ ಬಿಡುಗಡೆ ಮಾಡಿದ್ದಾಗಿ ತಿಳಿಸಿದ್ದರು. ಈ ಯೋಜನೆ ಕಾಮಗಾರಿ ಕೈಗೆತ್ತಿಕೊಂಡು ಹಳೇ ಮೈಸೂರು-ಕೊಡಗು ಜಿಲ್ಲೆಗೆ ರೈಲು ಸಂಪರ್ಕಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಸಕಾರಾತ್ಮಕ ಸ್ಪಂದನೆ: ಕೇಂದ್ರ ವಾಣಿಜ್ಯ ಸಚಿವರೊಂದಿಗೆ ತಂಬಾಕು ಬೆಳೆಗೆ ಸಂಬಂಧಿಸಿದಂತೆ ಪ್ರಸ್ತಾಪಿಸಿ ದರ ಸಮರಕ್ಕೆ ಅಂತ್ಯ ಹಾಡುವ ಭರವಸೆ ನೀಡಿದ್ದಾರೆ. ಮೈಸೂರು ಮತ್ತು ಕುಶಾಲನಗರ ರೈಲ್ವೆ ಕುರಿತು ಅತಿ ಶೀಘ್ರದಲ್ಲೇ ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net