ಅನಗತ್ಯ ಯೋಚನೆಗಳಿಂದ ಹೊರ ಬನ್ನಿ

Karyagara
Published on

ಲಕ್ಷ್ಮೇಶ್ವರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಳಿಸುವ ಯಶಸ್ಸು ಮುಂದಿನ ಶೈಕ್ಷಣಿಕ ಜೀವನಕ್ಕೆ ಮಾರ್ಗದರ್ಶಿಯಾಗಲಿದೆ. ಅನಗತ್ಯ ಯೋಚನೆಗಳಿಂದ ಹೊರ ಬಂದು ಮನಸ್ಸನ್ನು ಓದಿನತ್ತ ಕೇಂದ್ರೀಕರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಪಟ್ಟಣದ ಬಿಸಿಎನ್ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಬೆಟ್ಟದಷ್ಟು ಆಸೆ-ಕನಸು ಕಟ್ಟಿಕೊಂಡು ಹಗಲಿರುಳು ದುಡಿಯುತ್ತಾರೆ. ಅದನ್ನು ಅರ್ಥೈಸಿಕೊಂಡು ದೃಢ ಹೆಜ್ಜೆ ಇಡಬೇಕು. ಪರೀಕ್ಷೆಗೆ ಓದಲು ರಜೆ ಕೊಡದೇ ಶಾಲೆಯಲ್ಲಿಯೇ ಓದಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಪೂರಕ ವಾತಾವರಣ, ಮೇಲ್ವಿಚಾರಣೆ, ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳು ಅತ್ಯಮೂಲ್ಯವಾದ ಸಮಯ ವ್ಯರ್ಥಮಾಡದೆ ಶಿಕ್ಷಕರ ಮಾರ್ಗದರ್ಶನದಲ್ಲಿ ಓದಬೇಕು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಗದಗ ಜಿಲ್ಲೆ 17ನೇ ಸ್ಥಾನದಲ್ಲಿದ್ದು, ಈ ವರ್ಷ ಒಂದಂಕಿಯೊಳಗಾದರೂ ಬರಬೇಕು ಎಂದರು.

ಬಿಸಿಎನ್ ಶಿಕ್ಷಣ ಸಂಸ್ಥೆ ನಿರ್ದೇಶಕ ಲೋಹಿತ ನೆಲವಿಗಿ ಅವರು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರಕ ಅಭ್ಯಾಸ ಸಾಮಗ್ರಿ ಉಚಿತವಾಗಿ ವಿತರಿಸಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕಾರ್ಯಾಗಾರಗಳು ಪ್ರೇರಣೆ ಮತ್ತು ಪೂರಕವಾಗಿವೆ. ಶಿಕ್ಷಕರು ಪಾಠ ಮಾಡುವುದು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳು ನಿರಂತರ ಓದಿ ಸಾಧನೆ ಮಾಡುವುದು ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು, ಋಣಾತ್ಮಕವಾಗಿ ಯೋಚಿಸದೇ ಆತ್ಮವಿಶ್ವಾಸದಿಂದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಲಿರುವ ಮೊಬೈಲ್‌ಫೋನ್, ಟಿವಿ ಬಳಸುವುದಿಲ್ಲ ಎಂಬ ದೃಢ ಸಂಕಲ್ಪ ವಿದ್ಯಾರ್ಥಿಗಳದ್ದಾಗಬೇಕು ಎಂದರು.

ಬಿಇಒ ನಾಣಕಿ ನಾಯ್ಕ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷಾರಂಭದಿಂದಲೇ ವಿದ್ಯಾರ್ಥಿಗಳಿಗಾಗಿ ಹಲವು ಪರಿಣಾಮಕಾರಿ ವಿಧಾನ, ವಿನೂತನ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿಷಯ ತಜ್ಞರ ಮೂಲಕ ತರಬೇತಿ, ಪ್ರೇರಣಾ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಪನ್ಮೂಲ ಶಿಕ್ಷಕಿ ನಂದಾ ಹಂಪಿಹೊಳಿ ಮಾತನಾಡಿ, ವಿದ್ಯಾರ್ಥಿಗಳು ಇಂಗ್ಲಿಷ್, ವಿಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡಲೆ ಎಂದು ಭಾವಿಸದೆ ಹೆಚ್ಚಿನ ವೇಳೆಯನ್ನು ಈ ವಿಷಯಗಳಿಗೆ ಮೀಸಲಿರಿಸಿ. ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಚರ್ಚಿಸಿ ವಿಷಯ ಮನನ ಮಾಡಿಕೊಳ್ಳಬೇಕು. ಅಧ್ಯಯನ ವೇಳಾಪಟ್ಟಿ ರಚಿಸಿಕೊಂಡು ಓದುವುದು ಮತ್ತು ಓದಿದ ವಿಚಾರ ಮನನ ಮಾಡಿಕೊಂಡು ಪರೀಕ್ಷೆಗೆ ಸನ್ನದ್ಧರಾಗಬೇಕು ಎಂದರು.

ವಿಜ್ಞಾನ, ಇಂಗ್ಲಿಷ್, ಗಣಿತ ವಿಷಯ ಶಿಕ್ಷಕರಾದ ಶೇಖರ ಚಿಕ್ಕಣ್ಣವರ, ಸಿ.ಎಫ್. ಜೋಗಿನ, ಸಿದ್ದಲಿಂಗೇಶ ಹಲಸೂರ ಕಾರ್ಯಾಗಾರ ನಡೆಸಿಕೊಟ್ಟರು. ನೋಡಲ್ ಅಧಿಕಾರಿ ಉಮೇಶ ಹುಚ್ಚಯ್ಯನಮಠ, ಬಿಸಿಎನ್ ವಿಜನ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಬಂಡಿವಾಡ, ಬಿಆರ್‌ಸಿ ಈಶ್ವರ ಮೆಡ್ಲೇರಿ, ಎಂ.ಎಂ ಹವಳದ, ಎಲ್.ಎಸ್. ಅರಳಹಳ್ಳಿ ಇತರರಿದ್ದರು. 23 ಶಾಲೆಗಳಿಂದ 1053 ವಿದ್ಯಾರ್ಥಿಗಳು, 76 ಶಿಕ್ಷಕರು ಪಾಲ್ಗೊಂಡಿದ್ದರು. ಬಸವರಾಜ ಶೆಟ್ಟರ, ರಾಜಶೇಖರ ಸ್ವಾಮಿ, ಗಿರೀಶ ಬಸರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 98ರಷ್ಟು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಿಸಿಎನ್ ವಿಜನ್ ಪಿಯೂ ಕಾಲೇಜಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗುವುದು. ಪಿಯುಸಿಯಲ್ಲಿ ಶೇ. 95ರಷ್ಟು ಅಂಕಗಳಿಸುವ ವಿದ್ಯಾರ್ಥಿಗೆ ಬಿಸಿಎನ್ ವಿಜನ್ ಪದವಿ ಕಾಲೇಜನಲ್ಲಿ ಪ್ರವೇಶ ಮತ್ತು ಸ್ಕಾಲರ್‌ಶಿಪ್ ನೀಡಲಾಗುವುದು. ಲೋಹಿತ ನೆಲವಿಗಿ, ಬಿಸಿಎನ್ ಶಿಕ್ಷಣ ಸಂಸ್ಥೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net