

ಮಡಿಕೇರಿ: ನಿಸ್ವಾರ್ಥದ ನೆಲೆವೀಡಾಗಿ ಹೆಸರಾಗಿದ್ದ ಭಾರತದಲ್ಲಿ ಇತ್ತೀಚಿಗೆ ಸ್ವಾರ್ಥಪರತೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ವಾರ್ಥ ಮನೋಭಾವನೆ ದೂರಮಾಡಿ ನಿಸ್ವಾರ್ಥವಾಗಿ ಸೇವೆ ಮಾಡುವ ಮೂಲಕ ವಿಶ್ವಾತ್ಮ ಪದವಿಯನ್ನು ಹೊಂದುವಂತೆ ನಾಡಿನ ಖ್ಯಾತ ವಿದ್ವಾಂಸ ಶಿವಮೊಗ್ಗದ ಜಿ.ಎಸ್.ನಟೇಶ್ ಹೇಳಿದರು.
ಮಡಿಕೇರಿ ಬಳಿಯ ಕಗ್ಗೋಡ್ಲು ಗ್ರಾಮದ ಕೂರ್ಗ್ ಅಂಬರ ರೆಸಾರ್ಟ್‌ನಲ್ಲಿ ಆಯೋಜಿತ ಲಯನ್ಸ್ ಸಂಸ್ಥೆಯ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಸೇವೆ ಮಾಡುವವರಲ್ಲಿ ನಗುವಿನ ಮನೋಭಾವ ಮುಖ್ಯವಾಗಿರಬೇಕು. ಸಂತೋಷದ ಭಾವನೆಯಿಂದ ಸೇವೆಗೆ ಮುಂದಾಗಬೇಕು. ಗಂಟು ಮುಖ ಹೊತ್ತು ಸೇವೆ ಮಾಡಲು ಮುಂದಾದರೆ ಯಾರೂ ಮೆಚ್ಚಲಾರರು. ಸೇವೆ ಮಾಡುವವರು ಮನಸ್ಸಿನಾಳದಿಂದ ಸಮಧಾನಚಿತ್ತರಾಗಿ ಇತರರಿಗೆ ಉಪಕಾರ ಮಾಡಲು ಮುಂದಾಗಬೇಕೆಂದು ಅಭಿಪ್ರಾಯಪಟ್ಟರು. ಲಯನ್ಸ್‌ನಂಥ ಸೇವಾ ಸಂಸ್ಥೆಗಳು ಜೀವನದಲ್ಲಿ ಸೇವಾ ಮನೋಭಾವನೆ ಹೆಚ್ಚಿಸಲು ನೆರವಾಗುತ್ತದೆ ಎಂದು ಹೇಳಿದರು.
ಪ್ರಕೃತ್ತಿಯನ್ನು ಮಾನವ ಸೂರೆ ಮಾಡುತ್ತಿದ್ದಾನೆ. ದೇವರಿಗೆ ಪ್ರಿಯವಾಗಿದೆ ಎಂದು ಪ್ರಕೃತ್ತಿಯಲ್ಲಿ ನಳನಳಿಸುವ ಪುಪ್ಪಗಳನ್ನು ಬೇಕಾಬಿಟ್ಟಿ ಹಾಳು ಮಾಡಿ, ಗಿಡಗಳು ಭಣಗುಟ್ಟುವಂತೆ ಮಾಡುತ್ತಿದ್ದಾನೆ. ಹಬ್ಬಗಳು ಬಂತೆಂದರೆ ಮಾವು, ಬಿಲ್ವ, ಬೇವಿನ ಮರಗಳು ಬೋಳಾಗುವಂಥ ಪರಿಸ್ಥಿತಿಯಿದೆ. ಪ್ರಕೃತ್ತಿ ನಳನಳಿಸುತ್ತಿದ್ದರೆ ದೇವರಿಗೆ ಇಷ್ಟ ಎಂಬುದು ಮರೆತೇ ಹೋಗುತ್ತದೆ. ಗಿಡ ಬೆಳೆಸುವ ಪ್ರವತ್ತಿ ಮರೆತೇ ಹೋಗುತ್ತಿದೆ ಎಂದು ನಟೇಶ್ ವಿಷಾಧಿಸಿದರು.
ಲಯನ್ಸ್ ಸಂಸ್ಥೆಯ ಮಾಜಿ ಗವರ್ನರ್ ಜಿ.ಶ್ರೀನಿವಾಸ್ ಮಾತನಾಡಿ, ಭಾರತೀಯರು ಸೇವಾಮನೋಭಾವನೆಯನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುಹೆಚ್ಚಾಗಿ ಬೆಳೆಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಭಾರತೀಯರ ಸೇವಾ ಗುಣ ಪ್ರಶಂಸೆಗೆ ಪಾತ್ರವಾಗುತ್ತಿದೆ. ಲಯನ್ಸ್ ಸಂಸ್ಥೆ ಕೂಡ ವಿಶ್ವವ್ಯಾಪಿ ಸಾವಿರಾರು ಸೇವಾ ಯೋಜನೆಗಳ ಮೂಲಕ ಜನರ ಶ್ರೇಯೋಭಿವದ್ಧಿಗೆ ಕಾರಣವಾಗಿದೆ ಎಂದರು.
ಲಯನ್ಸ್ ವಲಯದ ಪ್ರಥಮ ಮಹಿಳೆ ಪ್ರಿಯಾನವೀನ್ ಸಮಾವೇಶ ಉದ್ಘಾಟಿಸಿದರು. ಲಯನ್ಸ್ ಸಂಸ್ಥೆಯ ವಲಯಾಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿದರು.
ಇದೇ ಸಂದರ್ಭ ಮಡಿಕೇರಿಯ ಹಿರಿಯ ವೈದ್ಯ ಡಾ.ಎಂ.ಜಿ.ಪಾಟ್ಕರ್, ಬಾಲಾಜಿ ಕಶ್ಯಪ್, ಪೊಲೀಸ್ ಸಿಬ್ಬಂದಿ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.
ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ಎ.ನಿರಂಜನ್, ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಶೇಠ್, ಲಯನ್ಸ್ ಸಂಸ್ಥೆಯ ಗವರ್ನರ್ ಮೆಲ್ವಿನ್ ಡಿಸೋಜ, ಕಾರ್ಯದರ್ಶಿ ನಟರಾಜ್ ಕೆಸ್ತೂರ್, ಖಜಾಂಜಿ ಎನ್.ಬಿ.ರವಿ, ಲಯನ್ಸ್ ಸಂಸ್ಥೆಯ ವಿವಿಧ ಪದಾಧಿಕಾರಿಗಳು, ವಲಯ ಮುಖಂಡರು ವೇದಿಕೆಯಲ್ಲಿದ್ದರು. ಕೊಡಗು, ಮಂಗಳೂರು ವ್ಯಾಪ್ತಿಯ ನೂರಾರು ಸದಸ್ಯರು ಲಯನ್ಸ್ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.