

ಮಳವಳ್ಳಿ: ವೌಲ್ಯಯುತ ಶಿಕ್ಷಣ ದೊರೆಯುತ್ತಿರುವ ಸರ್ಕಾರಿ ಶಾಲೆಗಳನ್ನು ಹಳ್ಳಿಗಳಲ್ಲಿ ಅಭಿವೃದ್ಧಿಪಡಿಸಲು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡುವುದರಿಂದ ಆರ್ಥಿಕ ಹೊರೆಯಿಂದ ಪಾರಾಗುವುದರ ಜತೆಗೆ ಗುಣಮಟ್ಟದ ಶಿಕ್ಷಣ ಕೊಡಿಸಬಹುದಾಗಿದೆ ಎಂದು ಕ್ಷೇತ್ರ ಸಮನ್ವಯ ಅಕಾರಿ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಬಾಣಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೂಲ ಸೌಲಭ್ಯಗಳೇ ಇಲ್ಲದ ಬಹಳಷ್ಟು ಖಾಸಗಿ ಶಾಲೆಗಳ ಜಾಹಿರಾತು ಪ್ರಚಾರಗಳಿಗೆ ಮಾರುಹೋಗುವ ಪಾಲಕರು ಲಕ್ಷ, ಲಕ್ಷ ಶುಲ್ಕಪಾವತಿಸಿ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಇದರಿಂದ ಪೂರಕ ಕಲಿಕೆ ದೊರೆಯದೇ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗಿ ಶೈಕ್ಷಣಿಕ ಭವಿಷ್ಯ ವ್ಯತಿರಿಕ್ತವಾಗುವುದು ಒಂದೆಡೆಯಾರೆ ಕುಟುಂಬವೂ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿಕೊಳ್ಳಲಿದೆ ಎಂದರು.
ನಿಮ್ಮೂರಿನಲ್ಲೇ ಇರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಸಹಕಾರ ನೀಡುವುದರಿಂದ ವಿಷಯವಾರು ತರಬೇತಿ ಪಡೆದ ಶಿಕ್ಷಕರಿಂದ ಪಠ್ಯಕ್ರಮ ಬೋಧನೆ ಹಾಗೂ ಸರ್ಕಾರದಿಂದ ಉಚಿತವಾಗಿ ಎಲ್ಲ ರೀತಿಯ ಸವಲತ್ತುಗಳು ಬಳಸಿಕೊಂಡು ಮಕ್ಕಳಿಗೆ ಆತ್ಮಸ್ಥೆರ್ಯ ಹೆಚ್ಚಿಸುವಂತಹ ಉತ್ತಮ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು.
ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳಿಂದ ಕುಂಭಮೇಳ, ಪೂಜಾ ಕುಣಿತ ನಡೆಯಿತು.ವೇದಿಕೆ ಕಾರ್ಯಕ್ರಮದಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.
ಡಿ.ಹಲಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ರಮೇಶ್, ಎಸ್‌ಡಿಎಂಸಿ ಸಮಿತಿ ಅಧ್ಯಕ್ಷ ಬಸವರಾಜು, ಶಿಕ್ಷಣ ಸಂಯೋಜಕ ಯೋಗಾನಂದ, ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್, ವಿಶ್ವನಾಥ್, ಮುಖ್ಯಶಿಕ್ಷಕ ಜಿ.ಎಸ್.ರವಿ, ಸಹ ಶಿಕ್ಷಕರಾದ ಎಚ್.ಆರ್.ಆನಂದ, ಆರ್.ಜಿ.ರುಕ್ಮಿಣಿ, ಶಿಲ್ಪಾ, ಉಮಾ, ಗ್ರಾಮದ ಯಜಮಾನ ಶ್ರೀಧರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.