

ಬ್ಯಾಡಗಿ: ಮನಸೆಂಬ ಭೂಮಿಯಲ್ಲಿ ಬೀಜ ಬಿತ್ತಿದಾಗ ಕಳೆ(ಕಸ), ಬೆಳೆ ಎರಡೂ ಒಂದಾಗಿ ಬೆಳೆಯುತ್ತವೆ. ಆಗ ಕಸ ಕಿತ್ತು ಬೆಳೆ ಉಳಿಸಿಕೊಳ್ಳುವಂತೆ ನಾವು ಒಳ್ಳೆಯದನ್ನು ಮಾತ್ರ ಮನಸಿನಲ್ಲಿಟ್ಟುಕೊಂಡಾಗ ಜೀವನವೂ ತೃಪ್ತಿಯಾಗಿ ನಡೆಯಲಿದೆ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀಗಳು ಹೇಳಿದರು.
ಪಟ್ಟಣದ ಎಸ್ಜೆಜೆಎಂ ಸರ್ಕಾರಿ ಕ್ರೀಡಾಂಗಣದಲ್ಲಿ ಜರುಗುತ್ತಿರುವ ಪ್ರವಚನದಲ್ಲಿ ಶನಿವಾರ ಅವರು ಆಶೀರ್ವಚನ ನೀಡಿದರು.
ಮನುಷ್ಯನ ಜೀವನದಲ್ಲಿ ಕೆಲವೊಮ್ಮೆ ಕಸ ಬಂದು ಮನಸು ಸೇರಿ ಬಿಡುತ್ತದೆ. ಕಸವೆಂಬ ಹೊಲಸು ವಿಚಾರಗಳನ್ನು ಆಗಾಗ ಹೊರಹಾಕುವ ಮೂಲಕ ಮನಸನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ನಮ್ಮಿಚ್ಛೆಯಂತೆ ಜಗತ್ತು ಎಂದಿಗೂ ನಡೆಯುವುದಿಲ್ಲ. ಜಗತ್ತಿನ ಇಚ್ಛೆಯಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ನಮ್ಮ ಶರೀರ ಸೊರಗಬಾರದು, ಸಂಪತ್ತು ಕರಗಬಾರದು, ಸಂಬಂಧಗಳು ಕೆಡಬಾರದು, ಸಾವು ಬರಬಾರದು ಎನ್ನುವುದು ಎಲ್ಲರ ಇಚ್ಛೆಗಳಾಗಿವೆ. ಈ ನಾಲ್ಕು ನಮ್ಮಿಚ್ಛೆಯಂತೆ ಎಂದಿಗೂ ನಡೆಯುವುದಿಲ್ಲ, ಎಲ್ಲವೂ ನಿಸರ್ಗದಂತೆ ನಡೆಯಲಿದ್ದು, ಆವುಗಳಿಗೆ ಹೊಂದಿಕೊಂಡು ನಡೆಯಬೇಕಿದೆ. ನನ್ನಿಚ್ಛೆ ನಡೆಯದಿದ್ದಾಗ ದು:ಖ ಆವರಿಸುವುದು ಸಹಜ. ಈಶ್ವರನ ಇಚ್ಛೆಯಂತೆ ಜಗತ್ತು ನಡೆಯಲಿದೆ. ನಾವೆಲ್ಲರೂ ಅವನ ಮಕ್ಕಳು, ಸಂಕಟ, ನೋವು, ದು:ಖ ವ್ಯಕ್ತಪಡಿಸಲು ನಾವು ತಂದಿದ್ದಾದರೂ ಏನು..? ಪ್ರಶ್ನಿಸಿದರು.
ದು:ಖ ಯಾಕೆ ಬರಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಬುದ್ಧರಂತಹ ಮಹಾತ್ಮರು ಜೀವನ ತ್ಯಾಗ ಮಾಡಿದ್ದಾರೆ. ಪತಂಜಲಿ ಮಹರ್ಷಿಗಳು, ಶಂಕರಾಚಾರ್ಯರು, ಶರಣರು, ಸಂತರು ದು:ಖ ಹೊರತಾದಲ್ಲಿ ಜೀವನ ಸುಖಮಯವಾಗಲಿದೆ ಎನ್ನುವುದನ್ನು ಅರ್ಥೈಸಿಕೊಂಡಿದ್ದರು. ಸುಖದಲ್ಲಿ ಎಲ್ಲರಿದ್ದು, ದು:ಖ ಬಂದಾಗ ಯಾರೂ ಇರಲ್ಲ. ದುಃಖ, ಸಾವಿನ ಪಾಲನ್ನೂ ಯಾರೂ ಕೇಳಿಲ್ಲ, ಕೇವಲ ಪ್ರಾಪರ್ಟಿ ಪಾಲು ಮಾತ್ರ ಕೇಳುತ್ತಾರೆ. ಇದಕ್ಕೆ ದೇವರು ಕೊಟ್ಟಿದ್ದನ್ನು ಪಡೆದು, ಇರುವುದರಲ್ಲಿ ಸುಖವಾಗಿ ಬದುಕಬೇಕೆನ್ನುವುದು ಸತ್ಯ. ನೋವಿಲ್ಲದ ಮನ, ಸಾವು ಇಲ್ಲದ ಮನೆ ಎಲ್ಲಿವೆ..? ಅರಳಿದ ಹೂವು ಬಾಡಲೇಬೇಕು. ಹುಟ್ಟಿದ ಮನುಷ್ಯ ಸಾಯಲೇಬೇಕು ಎನ್ನುವುದನ್ನು ತಿಳಿದರೆ ದು:ಖ ಎಲ್ಲಿದೆ..? ನಮ್ಮ ಕೈ ಹತ್ತು ಬೆರಳುಗಳು ಸುಖವಿದ್ದಾಗ ಎರಡೂ ಕೂಡಿ ಸಂತಸದಿಂದ ಚಪ್ಪಾಳೆ ತಟ್ಟುತ್ತವೆ. ಆದರೆ, ದುಃಖ ಬಂದು ಕಣ್ಣೀರು ಒರೆಸುವಾಗ, ಒಂದೇ ಬೆರಳು ಮಾತ್ರ ಮುಂದಾಗುತ್ತದೆ. ಇನ್ನುಳಿದ ಬೆರಳುಗಳು ಏಕೆ ಬರಲಿಲ್ಲ..? ನನ್ನೊಂದಿಗಿರುವ ಬೆರಳುಗಳೇ ಸಹಾಯ ಮಾಡದಿದ್ದಾಗ ಜಗತ್ತಿನಲ್ಲಿ ಯಾರು ಬರುತ್ತಾರೆ ಹೇಳಿ, ಭಗವಂತನ ಪ್ರೇರಣೆಯ ಇಚ್ಛೆಯನ್ನು ನಾವು ಅನುಭವಿಸಬೇಕು. ಸುಖ-ದು:ಖ ಅನುಭವಿಸದ ಹೃದಯಗಳೂ ಇಲ್ಲವೇ ಇಲ್ಲ. ಆದರೆ ದು:ಖವೇ ಆಗದಿದ್ದಲ್ಲಿ ಹೃದಯ ಇಲ್ಲವೆನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾ ಹಾಗೂ ನೀ ಎನ್ನುವುದರಲ್ಲಿ ಜೀವನ ನಡೆದಿದ್ದು, ಇವೆರಡು ಇಲ್ಲದಿದ್ದಲ್ಲಿ ಎಂದಿಗೂ ಸಮಸ್ಯೆಯೇ ಉದ್ಭವಿಸುವುದಿಲ್ಲ. ಪ್ರತಿಯೊಬ್ಬರೂ ಕರುಣೆ ಹಾಗೂ ನಿಸ್ವಾರ್ಥದ ಜೀವನ ಅಳವಡಿಸಿಕೊಳ್ಳಬೇಕು. ದೇವರು ಕೊಟ್ಟಿರುವ ವಿದ್ಯೆ, ಸಂಪತ್ತು, ಅನ್ನ, ಆಹಾರ ಎಲ್ಲವನ್ನೂ ದಾನ ಮಾಡಿದರೆ ಮಾತ್ರ ಅವುಗಳಿಗೆ ಮೌಲ್ಯ ಹೆಚ್ಚುತ್ತದೆ. ಎಲ್ಲ ನೀಡಿದ ಭಗವಂತನಿಗೆ ಸ್ವಲ್ಪ ಕೃತಜ್ಞತಾಭಾವ, ಉಪಕಾರ ಸ್ಮರಿಸದವರಿಗೆ ಧನ್ಯವಾದ ಹೇಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಮಕ್ಕಳು ಸುಸಂಸ್ಕೃತರಾಗಿರಲು ಗುಣಮಟ್ಟದ ಶಿಕ್ಷಣ, ಪರಿಸರದ ಅಗತ್ಯವಿದೆ. ಮಕ್ಕಳು, ತಂದೆ- ತಾಯಿ ಹಾಗೂ ಪೋಷಕರಿಗೆ ಹೆಗಲು ಕೊಟ್ಟು ಅವರ ಭಾರ ಇಳಿಸಬೇಕೆ ಹೊರತು, ಅವರಿಗೆ ಭಾರವಾಗಿ ಎಂದಿಗೂ ಬದುಕಬಾರದು ಎಂದು ಶ್ರೀಗಳು ತಿಳಿಸಿದರು.
ಹೂವಿನ ಹಡಗಲಿ ಮಠದ ಡಾ. ಹಿರಿಶಾಂತ ಸ್ವಾಮೀಜಿ, ಬಳಗಾನೂರಿನ ಶಿವಶಾಂತವೀರ ಶರಣರು, ಸಂಗಣ್ಣ ಗಡಗಿ ಹಾಗೂ ಸೇವಾ ಸಮಿತಿ ಕಾರ್ಯಕರ್ತರು ಇದ್ದರು.
ಸಂಸಾರದಲ್ಲಿ ಬಾರದಿರಲಿ ಸಂಶಯ
ಪತಿ ಪತ್ನಿಯರ ನಡುವೆ, ಸಂಸಾರದಲ್ಲಿ ಸಂಶಯದ ಕಸ ಹೊಕ್ಕರೆ, ಸಂಸಾರ ಪೂರ್ಣ ನಾಶವಾಗಲಿದೆ. ಇಬ್ಬರ ನಡುವೆ ವಿಶ್ವಾಸ, ನಂಬಿಕೆ ಇರಲೇಬೇಕು. ಆಕಾಶದಲ್ಲಿರುವ ಗ್ರಹ ನಂಬಿ ಬದುಕುವ ನಾವು ಮನೆಯಲ್ಲಿರುವ ಗೃಹಿಣಿಯನ್ನು ನಂಬದಿದ್ದರೆ ಜೀವನ ಸುಗಮವಾಗಿ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಶ್ರೀಗಳು ಒಬ್ಬರ ಮೇಲೊಬ್ಬರ ನಂಬಿಕೆಯೇ ಜೀವನ ಎಂದು ತಿಳಿಸಿದರು.
15 ಸಾವಿರ ಜನ ಭಾಗಿ
ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳವರ ಪ್ರವಚನ ಕೇಳಲು ಕಳೆದ 12 ದಿನಗಳ ಕಾಲ 8 ರಿಂದ 10 ಸಾವಿರಷ್ಟಿದ್ದ ಭಕ್ತರು, ಕೊನೇ ದಿನವಾದ ಭಾನುವಾರ ಏಕಾಏಕಿ 15 ಸಾವಿರ ದಾಟುವ ಮೂಲಕ ಪಟ್ಟಣದಲ್ಲಿ ನಡೆದ ಹಿಂದಿನ ಎಲ್ಲ ಧಾರ್ವಿುಕ ಕಾರ್ಯಕ್ರಮಗಳ ದಾಖಲೆ ಮುರಿದುಹಾಕಿ ಅಭೂತಪೂರ್ವ ಕಾರ್ಯಕ್ರಮ ಎನಿಸಿತು.