

ಕೆರೂರ: ಕಣ್ಣು ಮಾನವನ ಮುಖ್ಯ ಅಂಗ. ಪ್ರತಿಯೊಬ್ಬರೂ ಸಕಾಲಕ್ಕೆ ನೇತ್ರ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಡಾ. ಎಂ.ಜಿ. ಕಿತ್ತಲಿ ಹೇಳಿದರು.
ಬಾಗಲಕೋಟೆಯ ವಾಸವಿ ಎಜ್ಯುಕೇಷನ್ ಚಾರಿಟೆಬಲ್ ಟ್ರಸ್ಟ್ ಹಾಗೂ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಂತಹ ಮಾರಕ ವಸ್ತುಗಳಿಂದ ಮಕ್ಕಳು ಕಣ್ಣಿನ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಮುಂಜಾಗ್ರತೆ ಕ್ರಮವಾಗಿ ಕಣ್ಣಿನ ತಪಾಸಣೆ ಮಾಡಿಸಿ ವೈದ್ಯರ ಸಲಹೆ ಪಡೆಯಬೇಕು ಎಂದರು.
ಬಾಗಲಕೋಟೆ ಎಂ. ಎಂ. ಜೋಶಿ ಸಂಸ್ಥೆ ಆಡಳಿತಾಧಿಕಾರಿ ಡಾ. ಸಂಜೀವಕುಮಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ. ಬಿಪಿ ಮತ್ತು ಶುಗರ್‌ನಂತಹ ಕಾಯಿಲೆ ಇದ್ದವರು ಹೆಚ್ಚು ಜಾಗ್ರತೆ ವಹಿಸಬೇಕು. ಆಹಾರದಲ್ಲಿ ಸೊಪ್ಪು, ತರಕಾರಿ ಹೆಚ್ಚು ಸೇವಿಸುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರು.
ಶಿಬಿರದಲ್ಲಿ ಒಟ್ಟು 150 ವಿದ್ಯಾರ್ಥಿಗಳಿಗೆ ಹಾಗೂ 100 ಜನ ವೃದ್ಧ ಹಾಗೂ ವಯಸ್ಕರಿಗೆ ನೇತ್ರ ತಪಾಸಣೆ ಮಾಡಲಾಯಿತು.
ಸಂಸ್ಥೆ ಅಧ್ಯಕ್ಷೆ ಗೀತಾ ಪತ್ತೇಪೂರ, ಮಚರ್ಂಟ್ಸ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಧನಂಜಯ ಕಂದಕೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಶ್ರೀನಿವಾಸ ಕಂದಕೂರ, ಸಮೀರ್ ಪತ್ತೇಪೂರ ಇತರರಿದ್ದರು.