

ಮಳವಳ್ಳಿ: ಬೇಸಿಗೆ ಮತ್ತು ಲೋಕಸಭಾ ಚುನಾವಣೆ ಒಂದೇ ಸಮಯದಲ್ಲಿ ಬರುತ್ತಿರುವುದರಿಂದ ತಾಲೂಕಿನಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗುವುದು ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದ್ದು, ಕಂದಾಯ ಮತ್ತು ಪೊಲೀಸ್ ಇಲಾಖೆ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುವುದರಿಂದ ಜವಾಬ್ದಾರಿಯುತವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧಿಕಾರಿಗೆಳಿಗೆ ಎಚ್ಚರಿಕೆ ನೀಡಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಪಂ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಬಂದ ಮೇಲೆ ನೀವು ಅತ್ತ ಗಮನ ಹರಿಸಬೇಕಿದೆ. ಹಾಗಾಗಿ ಪ್ರಸ್ತುತ ತುರ್ತಾಗಿ ಆಗಬೇಕಿರುವ ಕಾರ್ಯನಿರ್ವಣೆಗಳ ಬಗ್ಗೆ ಚರ್ಚೆ ನಡೆಸುವಂತೆ ಸೂಚಿಸಿದರು. ಜತೆಗೆ ಶೈಕ್ಷಣಿಕವಾಗಿ ಪರೀಕ್ಷಾ ದಿನಗಳಾಗಿರುವುದರಿಂದ ಶಿಕ್ಷಣ ಇಲಾಖೆ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸಲು ಬೇಕಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದಕ್ಕೆ ಪೂರಕವಾಗಿ ಬೇಕಾಗುವ ಸಮಸ್ಯೆಗಳಿದ್ದರೆ ಮಾಹಿತಿ ನೀಡುವಂತೆ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿರುವ ಮಾರೇಹಳ್ಳಿ ಬಳಿ ಟೌನ್ ಪ್ಲಾನಿಂಗ್ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಬಡಾವಣೆ ನಿರ್ಮಿಸಲಾಗುತ್ತಿದ್ದು, ಸ್ಥಳ ಪರಿಶೀಲನೆ ನಡೆಸಿ ಸಂಬಧಪಟ್ಟ ಇಲಾಖೆಗಳಿಗೆ ವರದಿ ನೀಡುವುದರ ಜತೆಗೆ ಪೂರಕವಾದ ಬಡಾವಣೆ ರೂಪು-ರೇಷೆಗಳಿಲ್ಲದೆ ನಿರ್ಮಾಣವಾಗುವುದರಿಂದ ಮತ್ತೊಂದು ಸ್ಲಂ ಆಗುವುದನ್ನು ತಡೆಗಟ್ಟಲು ಸೂಕ್ತ ಕ್ರಮ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ ಅವರಿಗೆ ಸಲಹೆ ನೀಡಿದರು.
ವಿದ್ಯುತ್ ವಿಚಾರದಲ್ಲಿ ಬಹಳಷ್ಟು ದೂರುಗಳು ಕೇಳಿಬರುತ್ತಿವೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗುವ ಸಾಧ್ಯತೆ ಇರುವುದರಿಂದ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಇದರ ನಿವಾರಣೆಗೆ ಕ್ರಮ ವಹಿಸಿ ಎಂದು ಸೆಸ್ಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನಲ್ಲಿ ಅನುಷ್ಠಾನಗೊಂಡಿರುವ 596 ಕೋಟಿ ರೂ. ಅನುದಾನದ ಹನಿ ನೀರಾವರಿ ಯೋಜನೆಯನ್ನು ಚುನಾವಣೆ ನಂತರ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಮಾಜಿಕ ಪಿಡುಗುಗಳು ಎದುರಾದಾಗ ಮೊಳಕೆಯಲ್ಲೇ ಅವುಗಳನ್ನು ಹತ್ತಿಕ್ಕಲು ಕ್ರಮ ವಹಿಸಬೇಕು. ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳು ಹರಡವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ಅವರಿಂದ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಪಾಲನೆ ಮತ್ತು ಹೆರಿಗೆಗಳು ಎಷ್ಟಿವೆ? ಹಾಗೂ ಪಟ್ಟಣದಲ್ಲಿರುವ ಆಯುಷ್ ಆಸ್ಪತ್ರೆಯಲ್ಲಿ ವೈದ್ಯರು ಯಾವ ಸಮಯಕ್ಕೆ ಬರುತ್ತಿದ್ದಾರೆ? ಎಂದು ಕೇಳಿದಾಗ ಕಿರುಗಾವಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಲವು ತಿಂಗಳಿಂದ ಹೆರಿಗೆ ಸಂಬಂಧಿಸಿದಂತೆ ಯಾವುದೇ ಶಸ್ತ್ರಚಿಕಿತ್ಸೆ ನಡೆದಿಲ್ಲವೆಂದು ಡಾ.ವೀರಭದ್ರಪ್ಪ ತಿಳಿಸಿದರು.
ಕೂಡಲೇ ಕಿರುಗಾವಲು ಆಸ್ಪತ್ರೆ ಪ್ರಸೂತಿ ವೈದ್ಯೆ ಹಾಗೂ ಪಟ್ಟಣದ ಆಯುಷ್ ಆಸ್ಪತ್ರೆ ವೈದ್ಯರ ವಿರುದ್ಧ ಕರ್ತವ್ಯ ಲೋಪವಿರುವ ನಿರ್ಣಯ ಬರೆದು ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಸಭಾ ನಿರ್ಣಯ ಕಳಿಸುವಂತೆ ತಾಪಂ ಇಒ ಮಮತಾ ಅವರಿಗೆ ಶಾಸಕರು ಸೂಚಿಸಿದರು.
ಇದೇ ವೇಳೆ ವಿವಿಧ ಇಲಾಖೆಗಳಲ್ಲಿನ ಅಭಿವೃದ್ಧಿ ವಿಚಾರಗಳು ಹಾಗೂ ಸರ್ಕಾರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ಸಿದ್ಧಪಡಿಸಿ ನೀಡುವಂತೆ ಸಲಹೆ ನೀಡಿದರು.
ತಹಸೀಲ್ದಾರ್ ಲೋಕೇಶ್, ತಾಪಂ ಇಒ ಮಮತಾ, ಪುರಸಭೆ ಮುಖ್ಯಾಧಿಕಾರಿ ನಾಗರತ್ನಾ, ಡಿವೈಎಸ್ ಪಿ.ಕೃಷ್ಣಪ್ಪ, ಯೋಜನಾಧಿಕಾರಿ ದೀಪು ಇದ್ದರು.