ಚುನಾವಣೆ ಎದುರಿಸಲು ಸಜ್ಜಾಗಿ : ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಕರೆ

BJP
Published on

ಮೈಸೂರು: ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಕರೆ ನೀಡಿದರು.

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಮಂಗಳವಾರ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಹಮ್ಮಿಕೊಂಡ ಪ್ರಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಾವುದೇ ಚುನಾವಣೆಗೆ ಅಗತ್ಯ ತಯಾರಿ ಮಾಡಿಕೊಳ್ಳದೆ ಇದ್ದರೆ ಗೆಲುವು ಸಾಧಿಸಲು ಸಾಧ್ಯವಿಲ್ಲ. ಕೇವಲ ರಾಮಮಂದಿರ, ಕಾಶ್ಮೀರದ ಆರ್ಟಿಕಲ್ 370 ವಿಷಯ ಮುಂದಿಟ್ಟುಕೊಂಡು ಸಹ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆಗೆ ಸಹಕಾರಿಯಾಗುವ ಅಂಶಗಳ ಕಡೆಗೆ ಗಮನ ಹರಿಸಬೇಕು. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕರ್ತರು ಪ್ರತಿಯೊಂದು ಕ್ಷೇತ್ರದ ಸಂಪೂರ್ಣ ಮಾಹಿತಿ ಕಲೆ ಹಾಕಬೇಕು. ಕ್ಷೇತ್ರದ ಮತದಾರರು, ಜಾತಿವಾರು ಜನಸಂಖ್ಯೆ, ಕ್ಷೇತ್ರದಲ್ಲಿ ಈ ಹಿಂದೆ ನಮ್ಮ ಪಕ್ಷದ ಗಳಿಸಿದ ಮತಗಳು, ಈ ಬಾರಿ ಎಷ್ಟು ಎಷ್ಟುಗಳು ಬರಬಹುದು, ಕ್ಷೇತ್ರದಲ್ಲಿ ನಮ್ಮ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಮತದಾರರ ಪಟ್ಟಿ ಅವಲೋಕನ ಮಾಡುವುದು ಅತ್ಯಂತ ಮುಖ್ಯವಾದ ಕೆಲಸ. ಯುವಜನರು ಮತದಾರರ ಪಟ್ಟಿಗೆ ಸೇರ್ಪಡೆಯಾಗದೆ ಇದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಎರಡು ಕಡೆ ಹೆಸರು ಅಂತಹವರ ಹೆಸರುಗಳನ್ನು ಡಿಲೀಟ್ ಮಾಡಿಸಲು ಕ್ರಮ ವಹಿಸಬೇಕು. ಈ ರೀತಿಯ ಕ್ರಮಗಳಿಂದ ಕ್ಷೇತ್ರದ ಫಲಿತಾಂಶವೇ ಬದಲಾಗುತ್ತದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ರಾಜ್ಯಾಧ್ಯಕ್ಷ ಸೈಯದ್ ಸಲಾಂ, ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ನಗರಾಧ್ಯಕ್ಷ ಶ್ರೀವತ್ಸ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net