ಮುಂಬರುವ ಚುನಾವಣೆಗಳಿಗೆ ಈಗಿನಿಂದಲೇ ಸಜ್ಜಾಗಿ

abinandane
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಎಸ್ಸಿ ಘಟಕದಿಂದ ಜಿಲ್ಲೆಯ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಡಾ. ಕೆ.ಪಿ.ಅಂಶುಮಂತ್ ಉದ್ಘಾಟಿಸಿದರು. ಎಚ್.ಡಿ.ತಮ್ಮಯ್ಯ, ಮೋಟಮ್ಮ, ಮಲ್ಲೇಶ್ ಇತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ ಎಂಬುದನ್ನು ವಿಧಾನಸಭಾ ಚುನಾವಣೆಯಲ್ಲಿ ಸಾಬೀತು ಪಡಿಸಲಾಗಿದೆ. ಅದೇ ರೀತಿ ಮುಂಬರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರತಿಯೊಬ್ಬರೂ ತಯಾರಿ ನಡೆಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದಿಂದ ಶುಕ್ರವಾರ ಜಿಲ್ಲೆಯ ಶಾಸಕರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲ ವರ್ಗದ ಜನರಿಗೆ ಅಧಿಕಾರ ಸಿಗಬೇಕೆಂಬ ಉದ್ದೇಶದಿಂದ ಸರ್ವರಿಗೂ ಸಮಪಾಲು ಸಮಬಾಳು ಎಂಬ ಧ್ಯೇಯದೊಂದಿಗೆ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮತದಾರರು ಪಕ್ಷದ ಮೇಲೆ ವಿಶ್ವಾಸ ಇಟ್ಟು ಜಿಲ್ಲೆಯಲ್ಲಿ 5 ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಅರಿತುಕೊಂಡಿದ್ದಾರೆ. ಬಿಜೆಪಿ ಸಂವಿಧಾನ ವಿರೋಧಿ ನಿಲುವುಗಳ ವಿರುದ್ಧ ಹೋರಾಟ ಮಾಡಬೇಕಿದೆ. 20 ವರ್ಷಗಳಿಂದ ಶಾಸಕರಾಗಿದ್ದವರು ಜನಪರ ಕೆಲಸ ಮಾಡಿಲ್ಲ, ಅವರನ್ನು ಶಾಸಕಸ್ಥಾನದಿಂದ ಕೆಳಗಿಸಿದ್ದರೂ ಬುದ್ಧಿ ಬಂದಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಇತರ ಜನಾಂಗ ಭದ್ರ ಬುನಾದಿಯಾಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ. ಸಿಡಿಎ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ನೀಡಿದರೆ ತಪ್ಪೇನಿಲ್ಲ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿಗೆ ತಂಡ ಹೋಗಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದು ಹೆಚ್ಚಿನ ಅನುದಾನ ಪಡೆದುಕೊಳ್ಳಬೇಕು ಎಂದರು.
ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಎಂ.ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಈಶ್ವರ್, ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಮೂರ್ತಿ, ಎ.ಎನ್.ಮಹೇಶ್, ಡಾ. ಡಿ.ಎಲ್.ವಿಜಯ್‌ಕುಮಾರ್, ಎಚ್.ಪಿ.ಮಂಜೇಗೌಡ, ಸೈಯದ್ ಹನೀಫ್, ಡಿ.ಸಿ.ಪುಟ್ಟೇಗೌಡ, ಸತೀಶ್, ತನೂಜ್‌ನಾಯ್ಡು, ರಘು, ಮೋಹನ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net