

ಗೋಕರ್ಣ: ದೇಶದೆಲ್ಲೆಡೆ ತಮ್ಮತನದ ಮುದ್ರೆಯನ್ನೊತ್ತಿದ ಅನೇಕ ಮೇಧಾವಿಗಳನ್ನು ಪಡೆದ ಹವ್ಯಕ ಸಮಾಜ ದೇಶದ ಶ್ರೇಷ್ಠ ಸಮುದಾಯಗಳಲ್ಲೊಂದಾಗಿದೆ. ಇಂಥ ಸಮುದಾಯ ತನ್ನತನವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದು, ಮೂಲ ಹವ್ಯಕತ್ವವನ್ನು ಸಂರಕ್ಷಿಸುವ ಮಹತ್ಕಾರ್ಯಕ್ಕೆ ಸರ್ವರೂ ಸನ್ನದ್ಧರಾಗಬೇಕು ಎಂದು ಸಂಘಟನಾ ಚಾತುರ್ಮಾಸ್ಯ ದೀಕ್ಷಾಬದ್ಧರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಬುಧವಾರ ಆಯೋಜಿತವಾದ ಮುಳ್ಳೇರಿಯಾ ಮಂಡಲದ ಭಿಕ್ಷಾಸೇವೆಯಲ್ಲಿ ಅವರು ಆಶೀರ್ವಚನ ನೀಡಿದರು. ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಆಹಾರ-ವಿಹಾರ, ಸನಾತನ-ಸಂಪ್ರದಾಯಗಳಲ್ಲಿ ವೈಶಿಷ್ಟೃ ಸಾಕ್ಷಾತ್ಕರಿಸಿಕೊಂಡಿದ್ದ ಹವ್ಯಕ ಪರಂಪರೆ ಆಧುನಿಕತೆಯ ಹೆಸರಿನಲ್ಲಿ ಮೂಲ ಶ್ರೇಷ್ಠತ್ವದಿಂದ ವಿಮುಖವಾಗಿ, ವಿರೂಪತ್ವದ ಆಘಾತವನ್ನು ಎದುರಿಸುವಂತಾಗಿದೆ. ಜತೆಗೆ ಸಮಾಜದಲ್ಲಿ ಸಂಖ್ಯಾಬಲ ಕ್ಷೀಣಿಸುತ್ತಿರುವ ಸಮಸ್ಯೆಯೂ ಕಾಡುತ್ತಿದೆ. ಮಾರ್ಗದರ್ಶನದ ಕೊರತೆಯಿಂದ ಪ್ರಧಾನವಾಗಿ ಯುವ ಜನ ಸರಿದಾರಿಯಿಂದ ದೂರವಾಗುತ್ತಿದ್ದಾರೆ ಎಂದರು.
ಭಾರತೀಯತೆ, ಬ್ರಾಹ್ಮಣ್ಯ ಮತ್ತು ಹವ್ಯಕತ್ವವನ್ನು ಯುವಜನಾಂಗಕ್ಕೆ ಮರುಪೂರಣ ಮಾಡುವ ಸಾರ್ಥಕ ಕಾರ್ಯವಾಗಬೇಕು. ನಮ್ಮ ಮಕ್ಕಳು ಯುಕ್ತ ಮಾರ್ಗದಲ್ಲಿ ಸಾಗುವಂತೆ ಮಾಡುವ ಮುಖ್ಯ ಹೊಣೆಯ ಪರಿಶುದ್ಧ ಹಾಗೂ ಪರಿಪೂರ್ಣ ನಿರ್ವಹಣೆಯೇ ಶ್ರೀಮಠದ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಹಿಂದಿನ ಪ್ರಾಥಮಿಕ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳು ಅಪೇಕ್ಷಿಸುವ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಮುಂತಾದ ಎಲ್ಲ ಪ್ರಕಾರದ ಶಿಕ್ಷಣವನ್ನು ಇಲ್ಲಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಕಾರಣ ಶ್ರೀಮಠದ ಈ ಶೈಕ್ಷಣಿಕ ಮಹಾಭಿಯಾನಕ್ಕೆ ಬಲ ತುಂಬಿ, ಬೆಳೆಸುವ ಪ್ರಯತ್ನದಲ್ಲಿ ಇಡೀ ಸಮಾಜ ಕೈಜೋಡಿಸುವಂತಾಗಲಿ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ವೇದಮೂರ್ತಿ ನಾಗರಾಜ ಭಟ್ಟ, ಪಿಲಿಂಗುಳಿ ಕೃಷ್ಣ ಶರ್ಮಾ, ಡಾ.ನಾರಾಯಣ ಭಟ್ಟ ಕಲ್ಚಾರು, ಡಾ. ರಾಧಾಕೃಷ್ಣ ಡಿ.ಎನ್., ನೃಸಿಂಹ ಭಟ್ಟ ಕೆ., ಯು.ಎನ್. ಕೇಶವ ಭಟ್ಟ ನಿಡುಗಳ ಮುಂತಾದ 16 ಸಾಧಕರನ್ನು ಪುರಸ್ಕರಿಸಿ ಸನ್ಮಾನಿಸಲಾಯಿತು.
ಹವ್ಯಕ ಮಹಾಮಂಡಲದ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಮುಳ್ಳೇರಿಯಾ ಮಂಡಲಾಧ್ಯಕ್ಷ ಕೃಷ್ಣಮೂರ್ತಿ ಮಾಡಾವು, ಉಪಾಧ್ಯಕ್ಷ ನಾರಾಯಣಮೂರ್ತಿ ಮತ್ತು ದೇವಕಿ ಭಟ್ಟ ಪನ್ನೆ ಉಪಸ್ಥಿತರಿದ್ದರು.