

ಬಾದಾಮಿ: ಕರ್ನಾಟಕದಲ್ಲೇ ಪ್ರಸಿದ್ಧ ಪಡೆದ ಬಾದಾಮಿ ಬನಶಂಕರಿದೇವಿ ಜಾತ್ರೆ ಜನವರಿ ಎರಡನೇ ವಾರದಲ್ಲಿ ನಡೆಯಲಿದ್ದು, ಜಾತ್ರೆ ಯಶಸ್ವಿಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ತಾಪಂ ಸಭಾಭವನದಲ್ಲಿ ಮಂಗಳವಾರ ಸಂಜೆ ನಡೆದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಜಾತ್ರೆಗೆ ಇತಿಹಾಸವಿದ್ದು, ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ. ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಮೂಲ ಸೌಕರ‌್ಯ ಒದಗಿಸುವತ್ತ ಗಮನ ಹರಿಸಬೇಕೆಂದು ಸೂಚಿಸಿದರು.
ಈಗಾಗಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಆಯಾ ಕೆಲಸ ಕಾರ್ಯಗಳ ಮಾಹಿತಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಚಾಲುಕ್ಯರ ಐತಿಹಾಸಿಕ ನೆಲದಲ್ಲಿ ಧಾರ್ಮಿಕ ತಾಣವೂ ಆಗಿರುವುದು ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು.
ಜಾತ್ರೆಯಲ್ಲಿ ಸ್ವಚ್ಛತೆ, ಶೌಚಗೃಹ, ಸಾರಿಗೆ, ಬೆಳಕು, ಕುಡಿಯುವ ನೀರು, ಪಾರ್ಕಿಂಗ್, ಆರೋಗ್ಯ, ಹೊಂಡಕ್ಕೆ ನೀರು, ರಸ್ತೆ ದುರಸ್ತಿ, ತಾತ್ಕಾಲಿಕ ಪೊಲೀಸ್ ಠಾಣೆ, ಸಿಸಿ ಕ್ಯಾಮರಾ ಅಳವಡಿಕೆ, ಆಂಬುಲೆನ್ಸ್, ಅಗ್ನಿ ಶಾಮಕ ವಾಹನ ನಿಲುಗಡೆ ಸೇರಿ ಮಹತ್ವದ ಸೇವೆಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಬನಶಂಕರಿ ಜಾತ್ರೆ ಸಮಯದಲ್ಲಿ ಜಾನುವಾರು ಜಾತ್ರೆ ನಡೆಸಲು ಕ್ರಮ ಕೈಗೊಳ್ಳಬೇಕು. ಜಾತ್ರೆಯಲ್ಲಿ ಜಾನುವಾರುಗಳಿಗೆ ಯಾವುದೇ ರೋಗ ರುಜಿನಗಳು ಹರಡದಂತೆ ಮುಂಜಾಗ್ರತೆ ವಹಿಸಬೇಕೆಂದು ಸೂಚಿಸಿದರು.
ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಆಯಾ ಇಲಾಖೆ ವತಿಯಿಂದ ಪ್ರಚಾರಪಡಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸೇರಿ ಇನ್ನಿತರ ಯೋಜನಗಳ ಕುರಿತಾದ ಭಿತ್ತಿ ಪತ್ರ, ಬ್ಯಾನರ್‌ಗಳನ್ನು ಜನಸಂದಣಿ ಸ್ಥಳದಲ್ಲಿ ಹಾಕಬೇಕೆಂದು ಸಲಹೆ ನೀಡಿದರು. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಒಂದೇ ಸೂರಿನಡಿ ಎಲ್ಲ ಪರವಾನಗಿ ನೀಡಲು ನಿರ್ಣ ಕೈಗೊಳ್ಳಲಾಯಿತು.
ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ಮಧುರಾಜ ಕೆ., ತಾಪಂ ಇಒ ಸುರೇಶ ಕೋಕರೆ, ಮಲ್ಲಿಕಾರ್ಜುನ ಬಡಿಗೇರ, ಜಿಪಂ ಮಾಜಿ ಉಪಾಧ್ಯಕ್ಷ ಡಾ.ಎಂ.ಎಚ್. ಚಲವಾದಿ, ಗ್ರಾಪಂ ಅಧ್ಯಕ್ಷೆ ರಕ್ಷಿತಾ ಮರಡಿತೋಟ, ಸದಸ್ಯರಾದ ಬಸವರಾಜ ಹಂಪಿಹೊಳಿಮಠ, ವಿರುಪಾಕ್ಷಿ ಪಾಟೀಲ, ಪ್ರಕಾಶ ದೇಸಾಯಿ, ಚಿದಾನಂದ ಮೆಣಸಗಿ, ಅಶೋಕ ಅಂಬಿಗೇರ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಟ್ರಸ್ಟ್ ಕಮಿಟಿ ಸದಸ್ಯರಾದ ಮಹೇಶ ಪೂಜಾರ, ಮಾಲತೇಶ ಪೂಜಾರ, ರಮೇಶ ಪೂಜಾರ ಇತರರಿದ್ದರು.
ಅಧಿಕಾರಿಗೆ ನೋಟಿಸ್..!: ಪೂರ್ವಭಾವಿ ಸಭೆಯಲ್ಲಿ ಗೈರು ಹಾಜರಿದ್ದ ಎಪಿಎಂಸಿ ಕಾರ್ಯದರ್ಶಿಗೆ ಕಾರಣ ಕೇಳಿ ನೀಡುವಂತೆ ಶಾಸಕ ಚಿಮ್ಮನಕಟ್ಟಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಸೂಚಿಸಿದರು.