

ಉಪ್ಪಿನಬೆಟಗೇರಿ: ಗಣೇಶ ಚತುರ್ಥಿ ಹಾಗೂ ಈದ್ವಿುಲಾದ್ ಹಬ್ಬ ಒಟ್ಟಾಗಿ ಬಂದಿದ್ದು, ಹಿಂದು-ಮುಸ್ಲಿಂ ಸಮುದಾಯದವರು ಎರಡೂ ಹಬ್ಬಗಳನ್ನು ಪ್ರೀತಿ ಹಾಗೂ ಸೌಹಾರ್ದದಿಂದ ಆಚರಿಸಿಕೊಂಡು ಹೋಗಬೇಕು ಎಂದು ಗರಗ ಪಿಎಸ್ಐ ಪ್ರಕಾಶ ಡಿ. ಹೇಳಿದರು.
ಸ್ಥಳೀಯ ಶ್ರೀ ವಿರೂಪಾಕ್ಷೇಶ್ವರ ಪ್ರೌಢ ಶಾಲೆಯ ಸಭಾ ಭವನದಲ್ಲಿ ಮಂಗಳವಾರ ಸಂಜೆ ಗಣೇಶ ಹಬ್ಬ ಹಾಗೂ ಈದ್ವಿುಲಾದ್ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶ ಹಬ್ಬದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಕೆಲ ನಿಬಂಧನೆಗಳಿದ್ದು, ಗ್ರಾಮದಲ್ಲಿರುವ 18 ಗಣೇಶ ಮಂಡಳಿಯವರು ಅವುಗಳ ಪಾಲನೆ ಮಾಡಬೇಕು. ಈ ಸಂಬಂಧ ಇಲಾಖೆಯಿಂದ ಅರ್ಜಿ ವಿತರಿಸುತ್ತಿದ್ದು, ಅದನ್ನು ಪಡೆದು ಭರ್ತಿ ಮಾಡಿ ಕೊಡಬೇಕು. ಗಣೇಶ ಪ್ರತಿಷ್ಠಾಪನೆ ಸ್ಥಳದಲ್ಲಿ ಕೆಲವರು ಜೂಜು ಮತ್ತಿತರ ಅಕ್ರಮ ಚಟುವಟಿಕೆ ನಡೆಸುತ್ತಾರೆ ಎಂಬ ಮಾಹಿತಿ ಇದ್ದು, ಅಂಥಹ ಯಾವುದೇ ಕೆಲಸಗಳಿಗೆ ಆಸ್ಪದ ಕೊಡಬಾರದು ಎಂದರು.
ಜಿ.ಆರ್. ಜವಳಗಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಗಣೇಶ ಹಬ್ಬವನ್ನು ಎಲ್ಲರೂ ಸೇರಿ ಸೌಹಾರ್ದದಿಂದ ಆಚರಿಸಿಕೊಂಡು ಹೋಗೋಣ ಎಂದರು.
ಅಂಜುಮನ್ ಸಂಸ್ಥೆ ನಿರ್ದೇಶಕ ಮುಸ್ತಾಕ್ ಅಹ್ಮದ್ ಮಕಾಂದಾರ, ಪಿಕೆಪಿಎಸ್ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ವೀರಣ್ಣ ಪರಾಂಡೆ, ಬಸೀರ ಅಹ್ಮದ ಮಾಳಗಿಮನಿ, ಬಸವರಾಜ ಬೊಬ್ಬಿ ಮಾತನಾಡಿದರು.
ಸಭೆಯಲ್ಲಿ ಚನಬಸಪ್ಪ ಮಸೂತಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಬಾಬಾ ಮೊಹಿದ್ದಿನ್ ಚೌಧರಿ, ಮುಸ್ತಾಕ ನದಾಫ್, ಅಜೀತ ಛೆಬ್ಬಿ, ಉಮೇಶ ಬೀಡಿ, ಇಸ್ಮಾಯಿಲ್ ಹನುಮನಾಳ, ಪ್ರವೀಣ ಓಂಕಾರಿ, ಶ್ರೀಶೈಲ ಗೌರಿಮಠ, ರಮೇಶ ಓರಣಕರ ಸೇರಿದಂತೆ ಗಜಾನನ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.