ಬರಗಾಲ ಹೆದರಿಸಲು ಸಿದ್ಧರಾಗಿ

MLK TP SABE 22 (2)
Published on

ಮೊಳಕಾಲ್ಮೂರು; ಬರಗಾಲ ಅಪ್ಪಳಿಸಿದೆ. ಜನ-ಜಾನುವಾರುಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ತಾಪಂ ಆಡಳಿತಾಧಿಕಾರಿ ಲಕ್ಷ್ಮಣ್ ತಳವಾರ, ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಜನ-ಜಾನುವಾರುಗಳ ರಕ್ಷಣೆ ಅಧಿಕಾರಿ ವರ್ಗದ ಹೊಣೆ ಆಗಿದೆ ಎಂದರು.

ಮಳೆಯ ಅಭಾವದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಮುನ್ನ ಪ್ರತಿ ಗ್ರಾಪಂ ಮಟ್ಟದಲ್ಲಿ ಜಾಗೃತರಾಗಬೇಕು. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಸೂಚನೆ ನೀಡಿದರು.

ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಹರೀಶ್‌ಚಂದ್ ಮಾತನಾಡಿ, ತಾಲೂಕಿನಲ್ಲಿ 72 ಆರ್‌ಒ ಪ್ಲಾಂಟ್‌ಗಳ ಪೈಕಿ 20 ದುರಸ್ಥಿಯಲ್ಲಿವೆ. ನಿರ್ವಹಣೆ ಹೊತ್ತಿರುವ ಏಜೆನ್ಸಿಯವರಿಗೆ ದೂರವಾಣಿ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಅನೇಕ ಬಾರಿ ನೋಟೀಸ್ ಕೊಟ್ಟರು ನಿರ್ಲಕ್ಷೃ ವಹಿಸಿದ್ದಾರೆ. ಏನಾದರೂ ನೀರಿನ ಸಮಸ್ಯೆ ಎದುರಾದರೆ ಜನರು ನಮ್ಮನ್ನೇ ಹೊಣೆ ಮಾಡುವುದು ಎಂದು ಅಸಹಾಯಕತೆ ತೋಡಿಕೊಂಡರು.

ಈ ಪ್ರತಿಕ್ರಿಯೆಗೆ ಗರಂ ಆದ ಲಕ್ಷ್ಮಣ್ ತಳವಾರ, ಯಾವುದೇ ಸಬೂಬು ಹೇಳುವಂತಿಲ್ಲ. ಜವಾಬ್ದಾರಿ ಇರಬೇಕು. ಆರ್‌ಒ ಪ್ಲಾಂಟ್‌ಗಳ ನಿರ್ವಹಣೆ ಹೊತ್ತಿರುವ ಎಲ್ಲ ಏಜೆನ್ಸಿ ಮಾಲೀಕರ ಸಭೆ ಶೀಘ್ರ ಕರೆಯಬೇಕು. ಯಾವುದಕ್ಕೂ ಸ್ಪಂದಿಸದಿದ್ದರೆ ಅಂತಹ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒ ಅವರಿಗೆ ಶಿಫಾರಸ್ಸು ಮಾಡೋಣಾ ಎಂದರು.

ಸಿಡಿಪಿಒ ನವೀನ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿರುವ 202 ಅಂಗನವಾಡಿ ಕೆಂದ್ರಗಳಲ್ಲಿ ಮಕ್ಕಳ ಆರೈಕೆ ಮತ್ತು ಅಕ್ಷರ ಕಲಿಕೆ ಗುಣಾತ್ಮಕವಾಗಿ ನಡೆಯುತ್ತಿದೆ. ಗೃಹಲಕ್ಷ್ಮೀ ಯೋಜನೆಗೆ 34.216 ಮಂದಿ ನೋಂದಣಿ ಆಗಿದ್ದಾರೆ. 796 ಮಹಿಳೆಯರ ಆಧಾರ್ ಕಾರ್ಡ್ ತಿದ್ದುಪಡಿ ಆಗಬೇಕು. 27 ಮಂದಿ ಪೈಕಿ ಮರಣ ಮತ್ತು ಊರಲ್ಲಿಲ್ಲ ಎಂಬ ಪ್ರಕರಣ ಮಾಹಿತಿ ಆದರಿಸಿ ಪರಿಶೀಲನೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಬಿಇಒ ಕೆ.ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳ ಶಿಕ್ಷಣದ ಪ್ರಗತಿಗೆ ಪೂರಕವಾಗಿ ಎಲ್ಲ ರೀತಿಯಲ್ಲಿ ಸೂಕ್ತ ಕ್ರಮವಹಿಸಲಾಗಿದೆ. 302 ಶಿಕ್ಷಕರ ಕೊರತೆ ಇದ್ದು. 155 ಅಥಿತಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಗಿದಿದೆ. ಇರುವ ಶಿಕ್ಷಕರನ್ನೇ ಸರಿದೂಗಿಸಿಕೊಂಡು ಪಠ್ಯಕ್ರಮಕ್ಕೆ ಅನುಗುಣವಾಗಿ ಬೋಧನೆ ಕೈಗೊಳ್ಳಲು ಮಾಸ್ಟರ್‌ಗಳಿಗೆ ಸೂಚನೆ ಕೊಡಲಾಗಿದೆ ಎಂದರು.

ಲಕ್ಷ್ಮಣ್ ತಳವಾರ್ ಮಾತನಾಡಿ, ಶಾಲೆಗಳಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಗಮನ ಹರಿಸಬೇಕು. ವಿಶೇಷವಾಗಿ ಶುದ್ಧ ಕುಡಿಯುವ ನೀರು. ಅಡುಗೆ ಕೋಣೆ ಸ್ವಚ್ಛತೆ, ದುರಸ್ಥಿಯಲ್ಲಿರುವ ತರಗತಿ ಕೊಠಡಿಗಳನ್ನು ತಕ್ಷಣ ಸರಿಪಡಿಸುವಂತ ಕಾರ್ಯವಾಗಬೇಕು. ಅದೇ ರೀತಿ ಹಾಸ್ಟೆಲ್ ವ್ಯವಸ್ಥೆ ಕಡೆಯೂ ಗಮನಹರಿಸಬೇಕು ಸೂಚಿಸಿದರು.

ತಾಪಂ ಇಒ ಎಂ.ಆರ್.ಪ್ರಕಾಶ್, ವಿವಿಧ ಇಲಾಖೆ ಅಧಿಕಾರಿಗಳಾದ ಡಾ.ಮಧುಕುಮಾರ್, ಮಾಲತಿ, ನಾಗನಗೌಡ, ಹರ್ಷ, ಪರಮೇಶ್ವರಪ್ಪ, ಸೈಯದ್ ನಾಸೀರ್, ನಂದೀಶ್, ದಿವಾಕರ ಇತರರಿದ್ದರು.

ವರದಿ: ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಬೆಳೆ ಸಂಪೂರ್ಣ ನಷ್ಟವಾಗಿದೆ. ಹಿಂಗಾರು ಕೈಕೊಟ್ಟರೆ ಜನ-ಜಾನುವಾರುಗಳ ಜೀವನದ ಮೇಲೆ ಬಹುದೊಡ್ಡ ದುಷ್ಪರಿಣಾಮ ಬೀರಲಿದೆ. ಈ ಕುರಿತು ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ.-ಡಾ.ವಿ.ಸಿ.ಉಮೇಶ್, ಕೃಷಿ ಅಧಿಕಾರಿ

ಗೋಶಾಲೆ: ಬರಪೀಡಿತ ಪ್ರದೇಶ ಎಂದು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ದನ, ಕರು, ಕುರಿ, ಮೇಕೆಗೆ ಮೇವು-ನೀರಿನ ವ್ಯವಸ್ಥೆ ಮಾಡಲು ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮೊದಲ ಹಂತದಲ್ಲಿ ಮುತ್ತಿಗಾರಹಳ್ಳಿ, ರಾಯಾಪುರ, ರಾಂಪುರದಲ್ಲಿ ಗೋ ಶಾಲೆ ತರೆಯುವ ಪ್ರಸ್ತಾವನೆ ಕಳುಹಿಸಲಾಗಿದೆ.- ಡಾ.ರಂಗಪ್ಪ, ಪಶು ವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net