

ಹೊಸಕೋಟೆ: ದೇಶದಲ್ಲಿ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಮತ್ತು ಉಚಿತ ಚಿಕಿತ್ಸೆ ಸಿಗುವಂತಾಗಬೇಕು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಉಪ್ಪಾರಹಳ್ಳಿ ಎಂವಿಕೆ ಶಾಲೆಯಲ್ಲಿ ಎಂವಿಜೆ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿ, ಸರ್ಕಾರಗಳು ನಾಗರಿಕರಿಗೆ ಎಷ್ಟೇ ಸೌಲಭ್ಯ ಕಲ್ಪಿಸಿದರೂ ಗುಣಮಟ್ಟದ ಶಿಕ್ಷಣ ಮತ್ತು ಉಚಿತ ಆರೋಗ್ಯ ನೀಡುವುದು ಕರ್ತವ್ಯವಾಗಬೇಕು. ಇಂದಿಗೂ ಅನೇಕರಿಗೆ ಇವೆರಡೂ ಕೈಗೆಟುಕದೆ ದುಬಾರಿಯಾಗಿವೆ. ಹೊಸಕೋಟೆಯಲ್ಲಿ 28 ವರ್ಷಗಳ ಹಿಂದೆ ಪ್ರಾರಂಭವಾದ ಎಂವಿಜೆ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಆಸ್ಪತ್ರೆ ಈವರೆಗೆ 700 ಶಿಬಿರ ಮಾಡಲಾಗಿದೆ. ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಉಚಿತ ಆರೋಗ್ಯ ಸೇವೆ ನೀಡುತ್ತಾ ಬರುತ್ತಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ಯುವ ಸಮುದಾಯ ರಕ್ತದಾನ ಮಾಡಲು ಮುಂದೆ ಬರಬೇಕು. ಹುಟ್ಟುಹಬ್ಬ, ವಿವಿಧ ಗ್ರಾಮ ದೇವತೆಗಳ ಉತ್ಸವ ಸಂದರ್ಭಗಳಲ್ಲಿ ಆಯೋಜನೆ ಮಾಡುವ ರಕ್ತದಾನ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂದು ಹೇಳಿದರು.
ಶಿವನಾಪುರ ಆದಿಶಕ್ತಿ ಮಹಾಸಂಸ್ಥಾನ ಮಠದ ಶ್ರೀ ಪ್ರಣಾವಾನಂದಪುರಿ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಆರೋಗ್ಯ, ಶಿಕ್ಷಣ ಎನ್ನುವುದು ಅತ್ಯಗತ್ಯವಾಗಿದ್ದು, ಇವುಗಳನ್ನು ಪಡೆದುಕೊಳ್ಳುವುದೆ ದೊಡ್ಡ ಸಾಧನೆಯಾಗಿದೆ. ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಪಡೆದುಕೊಂಡರೆ ಅದೇ ದೊಡ್ಡ ಸಂಪತ್ತು ಎಂದರು.
ಬಮುಲ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ, ಕೆಎಂಎಂ ಮಂಜುನಾಥ, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಭೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಎಚ್.ಎಂ ಸುಬ್ಬರಾಜು, ಎಂವಿಜೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪ್ರಮೋದ್, ಬಿಇಒ ಪದ್ಮನಾಭ್, ಎಂವಿಕೆ ಶಾಲೆ ಮುಖ್ಯ ಶಿಕ್ಷಕ ದೇವರಾಜ್, ಕಾರ್ಯದರ್ಶಿ ಕಲಾವತಿ ಇದ್ದರು.