

ಕುಮಟಾ: ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ನಲುಗುತ್ತಿದೆ. ಅತಿಯಾದ ಇಂಗ್ಲಿಷ್ ವ್ಯಾಮೋಹದಿಂದ ಪಾಲಕರು ಹೊರ ಬರಬೇಕಿದೆ. ತಾಯಿ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿದರೆ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಆಶಾ ಎಂ.ಎಸ್. ಹೇಳಿದರು.
ಪಟ್ಟಣದ ಚಿತ್ರಿಗಿಯ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಕುಮಟಾ ಕನ್ನಡ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಧ್ಯಮ ಯಾನ (ಪತ್ರಿಕಾ ದಿನಾಚರಣೆ) ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರ ಬದುಕಿಗೆ ಸುರಕ್ಷತೆ ಬೇಕು. ನಿರ್ಭೀತವಾಗಿ ವರದಿ ಮಾಡುವ ವಾತಾವರಣ ಸೃಷ್ಟಿಯಾದಾಗ ಮಾತ್ರ ಉತ್ತಮ ವರದಿಗಳು ಪ್ರಕಟವಾಗಲು ಸಾಧ್ಯ ಎಂದರು.
ಬಿಇಒ ರಾಜೇಂದ್ರ ಭಟ್ಟ ಮಾತನಾಡಿ, ಕನ್ನಡ ವಿಷಯಕ್ಕೆ ಹೆಚ್ಚು ಅಂಕ ಪಡೆದವರನ್ನು ಮಾತ್ರ ಸನ್ಮಾನಿಸದೆ ಕನ್ನಡ ಮಾಧ್ಯಮದಲ್ಲಿ ಕಲಿತು ಹೆಚ್ಚು ಅಂಕ ಪಡೆದವರೆಲ್ಲರನ್ನೂ ಸನ್ಮಾನಿಸುವ ಕಾರ್ಯ ಶ್ಲಾಘನೀಯ ಎಂದರು.
ಡಾ. ಬಾಳಿಗಾ ವಾಣಿಜ್ಯ ಕಾಲೇಜು ಪ್ರಾಧ್ಯಾಪಕ ಡಾ. ಅರವಿಂದ ನಾಯಕ ಮಾತನಾಡಿ, ಉತ್ತಮ ವರದಿಗಳು ಪ್ರಕಟವಾದಾಗ ಬೆನ್ನು ತಟ್ಟುವ ಆಡಳಿತ ಶಾಹಿಗಳು ವ್ಯತಿರಿಕ್ತ ವರದಿಗಳು ಬಂದಾಗ ಸಮಾನ ಮನಸ್ಥಿತಿಯಿಂದ ನೋಡುವಂತಾಗಬೇಕು ಎಂದರು.
ಪಿಎಸ್‌ಐ ಇ.ಸಿ. ಸಂಪತ್ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ದುಶ್ಚಟಗಳ ವ್ಯಾಮೋಹದಿಂದ ದೂರವಿದ್ದು, ಓದಿನ ಮೂಲಕ ತಮ್ಮ ಗುರಿ ಸಾಧಿಸಬೇಕು ಎಂದರು.
ಕುಮಟಾ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಸದಾನಂದ ದೇಶಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಚಿತ್ರಿಗಿ ಪ್ರೌಢಶಾಲೆಯ ನೇಹಾ ಸುಬ್ರಾಯ ಗೌಡ, ಭೂಮಿಕಾ ನಾಗೇಶ ಹಿಣಿ, ನಂದನ್ ಸುಬ್ರಾಯ ಗೌಡ, ರಕ್ಷಿತಾ ಭದ್ರು ಮಡಿವಾಳ, ಶ್ರೀರಾಮನಾಥ ಪ್ರೌಢಶಾಲೆಯ ಕವನಾ ಭಗೀರಥ ನಾಯಕ, ಕತಗಾಲ ಎಸ್.ಕೆ.ಪಿ. ಹೈಸ್ಕೂಲ್‌ನ ಕವನಾ ಜಗದೀಶ ನಾಯ್ಕ, ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲ್‌ನ ವಿಜೇತಾ ಮಂಜುನಾಥ ಗುನಗಾ, ಬರ್ಗಿ ಸರ್ಕಾರಿ ಪ್ರೌಢಶಾಲೆಯ ರೇಣುಕಾ ರಾಮಚಂದ್ರ ಪಟಗಾರ, ಜನತಾ ವಿದ್ಯಾಲಯ ಮಿರ್ಜಾನ-ಕೊಡಕಣಿಯ ಸಾತ್ವಿಕ ಗಜಾನನ ಭಟ್ಟ ಸವರನ್ನು ಸನ್ಮಾನಿಸಲಾಯಿತು.
ಮುಖ್ಯಶಿಕ್ಷಕ ಪಾಂಡುರಂಗ ವಾಘ್ರೇಕರ್, ಪತ್ರಕರ್ತ ಕೃಷ್ಣಾನಂದ ಭಟ್ಟ, ಕನ್ನಡ ಸಂಘದ ಸಂತೋಷ ನಾಯ್ಕ, ಉದಯ ಭಟ್ಟ, ಶಿವಯ್ಯ ಹರಿಕಾಂತ, ರಾಘವೇಂದ್ರ ಪಟಗಾರ ಇತರರು ಇದ್ದರು. ಮಂಗಲದಾಸ ನಾಯ್ಕ, ಶಿಕ್ಷಕ ವಿನಾಯಕ ಶಾನಭಾಗ, ರಾಘು ಗುನಗಾ ನಿರ್ವಹಿಸಿದರು.