

ಕುಶಾಲನಗರ: ಕಾರ್ಮಿಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಮಹತ್ತರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಲು ಎಲ್ಲರೂ ಸಂಘಟಿತರಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್.ಕೆ.ಶಿವಶಂಕರ್ ಅವರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕ ಇಲಾಖೆಯಿಂದ ಹಲವಾರು ಸೌಲಭ್ಯ ದೊರೆಯುತ್ತಿದ್ದು, ನೋಂದಾಯಿತ ಕಾರ್ಮಿಕರು ವಾರ್ಷಿಕ ನವೀಕರಣ ಮಾಡಿಸದೆ ಸೌಲಭ್ಯವಂಚಿತರಾಗುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳು ದೂರಕುವಂತೆ ಮಾಡಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕಾಂಗ್ರೆಸ್‌ನಲ್ಲಿರುವ ಎಲ್ಲ ಘಟಕಗಳನ್ನು ಪುನಶ್ಚೇತನಗೊಳಿಸಲಾಗುವುದು. ಪ್ರತಿನಿತ್ಯ ಸಂಘಟನಾ ಮತ್ತು ಇತರ ಚಟುವಟಿಕೆಯಲ್ಲಿ ಸದಾ ಸಕ್ರಿಯರಾಗಿರಬೇಕು. ಘಟಕಗಳ ಅಧ್ಯಕ್ಷರು ಪಂಚಾಯಿತಿ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷ ಎಚ್.ಕೆ.ಶಿವಶಂಕರ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು. ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ನಟೇಶ್‌ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಯುವ ಘಟಕದ ಅಧ್ಯಕ್ಷ ಕಿರಣ್, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಶೆಟ್ಟಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅನೀಫ್, ಐ.ಎನ್.ಟಿ.ಯು.ಸಿ. ಜಿಲ್ಲಾಧ್ಯಕ್ಷ ಬಿ.ಡಿ.ಅಣ್ಣಯ್ಯ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಕಿಸಾನ್ ಘಟಕದ ಅಧ್ಯಕ್ಷ ನವೀನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ, ಪುರಸಭಾ ಸದಸ್ಯರಾದ ಶೇಕ್ ಖಲೀಮುಲ್ಲಾ, ದಿನೇಶ, ಪುಟ್ಟಲಕ್ಷ್ಮಮ್ಮ, ಜಯಲಕ್ಷ್ಮಮ್ಮ, ಪ್ರಮುಖರಾದ ದಿನೇಶ್, ಶೇಖರ್, ವಿವಿಧ ಘಟಕಗಳ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.