

ಸಿರಿಗೇರಿ: ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ಗ್ರಾಪಂ ಕಾರ್ಯದರ್ಶಿ ಕೆ. ಶಿವಮೂರ್ತಿ ಹೇಳಿದರು.
ಸಮೀಪದ ಎಂ ಸೂಗುರು ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಟಾಸ್ಕ್ ಫೋರ್ಸ್ ಸಮಿತಿ ಬಳ್ಳಾರಿ. ಏಡ್ಸ್ ನಿಯಂತ್ರಣ ಹಾಗೂ ನಿವಾರಣೆ ಘಟಕ ಬಳ್ಳಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಿರಿಗೇರಿ, ಗ್ರಾಂ ಪಂಚಾಯಿತಿ ಎಂ ಸೂಗೂರು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ರಕ್ತ ಕೇಂದ್ರ ಬಳ್ಳಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯೂನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು. 115 ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.