

ಗಂಗಾವತಿ: ಕೂಲಿಕಾರ್ಮಿಕರ ಕೊರತೆ ನೀಗಿಸಲು ಕೃಷಿ ತಾಂತ್ರಿಕತೆಯತ್ತ ರೈತರು ಗಮನಹರಿಸಬೇಕಿದ್ದು, ಕೃಷಿ ತಜ್ಞರಿಂದ ಸಲಹೆ ಪಡೆಯುವಂತೆ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ.ಜಿ.ನಾರಪ್ಪ ಸಲಹೆ ನೀಡಿದರು.
ನಗರದ ಸಿದ್ದಿಕೇರಿಯ ಭತ್ತದ ಗದ್ದೆಯಲ್ಲಿ ಕೃಷಿ ವಿಜ್ಞಾನ ಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ಅಧುನಿಕ ತಂತ್ರಜ್ಞಾನ ಪದ್ಧತಿಯಲ್ಲಿ ಭತ್ತ ಬಿತ್ತನೆ ಕಾರ್ಯದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು. ಬಿತ್ತನೆಗೆ ಕೃಷಿ ಕೂಲಿಕಾರರು ಸಕಾಲಕ್ಕೆ ದೊರೆಯುತ್ತಿಲ್ಲ. ಸಮಯವೂ ವ್ಯರ್ಥವಾಗುತ್ತಿದೆ. ಕೆವಿಕೆ ಅವಿಷ್ಕರಿಸಿರುವ ಡ್ರಮ್ ಸೀಡರ್ ಯಂತ್ರದ ಮೂಲಕ ಸುಲಭ ರೀತಿಯಲ್ಲಿ ಬಿತ್ತನೆ ಕೈಗೊಳ್ಳಬಹುದಾಗಿದೆ.
ಏಕರೂಪದ ಬೀಜ ವಿತರಣೆ ಮತ್ತು ಸಮಾನಂತರ ರೀತಿಯಲ್ಲಿ ಸಸಿಗಳನ್ನು ನೆಡಲು ನೆರವಾಗಲಿದೆ. ನೀರಿನ ಉಳಿತಾಯದ ಜತೆಗೆ ಕಳೆ ನಿರ್ವಹಣೆ ಸುಗಮವಾಗಲಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ ಎಂದರು.
ಟಿಎಪಿಸಿಎಂಎಸ್ ನಿರ್ದೇಶಕ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಈ ಹಿಂದೆ ಕೂರಿಗೆ ಪದ್ಧತಿಯಲ್ಲಿ ಬಿತ್ತಲಾಗುತ್ತಿದ್ದು, ಪ್ರಸ್ತುತ ಅಧುನಿಕ ತಾಂತ್ರಿಕತೆ ಬಳಸಿಕೊಳ್ಳಲಾಗುತ್ತಿದೆ ಎಂದರು.
ರೈತರಾದ ಜೋಗದ ಭರಮಪ್ಪ, ಕೃಷ್ಣನಾಯಕ, ಜೆ.ಹೊನ್ನಪ್ಪ, ಕನಕಪ್ಪ, ಚಂದ್ರು, ಗಾದಲಿಂಗಪ್ಪ, ಸರ್ಕಾರಿ ಕೃಷಿ ಕಾಲೇಜು ಪ್ರಶಿಕ್ಷಣಾರ್ಥಿಗಳಾದ ಶ್ರೇಯನಾಯಕ, ಅಂಕಿತಾ, ದೇವಣ್ಣ ಕೋಲ್ಕರ್, ಆಂಜನೇಯ, ಯಮುನೇಶ ಇತರರಿದ್ದರು.