

ಹೂವಿನಹಿಪ್ಪರಗಿ: ಪ್ರಸ್ತುತ ವರ್ಷದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಆ ನಿಟ್ಟಿನಲ್ಲಿ ಎಲ್ಲ ರೈತ ಬಾಂಧವರು ತಮ್ಮ ತಮ್ಮ ಹೊಲಗಳನ್ನು ಉತ್ತಮವಾಗಿ ಸಾಗುವಳಿ ಮಾಡಿ ಬಿತ್ತನೆಗೆ ತಯಾರಿ ಮಾಡಿಕೊಳ್ಳಲು ಮುಂದಾಗಬೇಕೆಂದು ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಗೋವಿಂದರಡ್ಡಿ ಮೆದಿಕೆನಾಳ ಹೇಳಿದರು.
ಸ್ಥಳಿಯ ರೈತ ಸಂಪರ್ಕ ಕೇಂದ್ರದಲ್ಲಿ 2024&25ನೇ ಸಾಲಿನ ಮುಂಗಾರು ಹಂಗಾಮಿನ ರೈತರ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ರೈತರಿಗೆ ಬೇಕಾಗುವ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದ್ದು, ಯಾವುದೇ ರೀತಿ ಕಡಿಮೆ ಬೀಳದ ಹಾಗೆ ಇಲಾಖೆ ಸಜ್ಜಾಗಿದೆ.
ಮುಂಗಾರು ಹಂಗಾಮಿನ ಬೀಜಗಳಾದ ಮುಸುಕಿನ ಜೋಳ, ಸಜ್ಜೆ, ಸೂರ್ಯಕಾಂತಿ, ತೊಗರಿ, ಹೆಸರು ಸೆೇರಿದಂತೆ ಇತರೆ ಬೀಜವನ್ನು ರೈತರಿಗೆ ಸರ್ಕಾರದ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ರೈತರು ಬೀಜವನ್ನು ಪಡೆಯಲು ನಮ್ಮಲ್ಲಿ ಬರುವಾಗ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿ ಜೊತೆಗೆ ಜಮೀನಿನಿ ಉತಾರ ತರಬೇಕು. ಎಲ್ಲ ವರ್ಗದ ರೈತರು ಕೃಷಿ ಇಲಾಖೆಯ ರಿಯಾಯಿತಿ ದರದಲ್ಲಿ ನೀಡುವ ಬೀಜ, ಔಷಧ ಸೇರಿ ಇತರೆ ರೈತೋತ್ಪನ್ನ ಪದಾರ್ಥಗಳನ್ನು ಪಡೆದು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಅವರು ಹೇಳಿದರು.
ಹತ್ತಾರು ಗ್ರಾಮಗಳ ರೈತರಿಗೆ ಬೀಜಗಳನ್ನು ವಿತರಿಸಲಾಯಿತು. ಲೋಕೇಶ ಚಿಕ್ಕಮಠ, ಮನೋಜ ನಂದಿಕೋಲಮಠ, ಚಂದು ಗುಂಡಾನವರ, ನಿಂಗನಗೌಡ ಪಾಟೀಲ, ನಬೀಸಾ ನಡುವಿನಮನಿ, ಶರಣಬಸು ಮಡಿಕೇಶ್ವರ, ಭೀಮಣ್ಣ ಚಿಮ್ಮಲಗಿ, ಶಶಿಧರ ಮೂಲಿಮನಿ, ರೆಹಮಾನ ನದಾಫ್, ಶಿವನಗೌಡ ಪಾಟೀಲ, ಮಾಳಪ್ಪ ಪೂಜೇರಿ ಇತರರಿದ್ದರು.