

ಕಡೂರು: ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ದಸರಾ ಕ್ರೀಡಾಕೂಟ ಸಹಕಾರಿ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ದೈಹಿಕವಾಗಿ ಸಧೃಡವಾಗಿದ್ದರೆ ಜೀವನ ಸುಗಮವಾಗಿ ಸಾಗಲಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ಆಸಕ್ತಿ ಕಡಿಮೆಯಾಗುತ್ತಿರುವುದು ವಿಪರ್ಯಾಸ. ಇದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಯುವ ಸಮುದಾಯಕ್ಕೆ ತನ್ನ ಸಾಮಾರ್ಥ್ಯ ಸಾಬೀತು ಪಡಿಸಲು ದಸರಾ ಕ್ರೀಡಾಕೂಟ ಒಂದು ಉತ್ತಮ ವೇದಿಕೆ ಎಂದು ಹೇಳಿದರು. ತಾಪಂ ಇಒ ಸಿ.ಆರ್.ಪ್ರವೀಣ್, ಬಿಇಒ ಆರ್.ಸಿದ್ದರಾಜುನಾಯ್ಕ, ತಾಲೂಕು ಕ್ರೀಡಾಧಿಕಾರಿ ಎಚ್.ಎಲ್. ಮುರುಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ, ತಾಲೂಕು ಅಧ್ಯಕ್ಷ ಹರೀಶ್‌ಅಗ್ನಿ, ಆನಂದಪ್ಪ, ರಮಾಕಾಂತ್, ಧರ್ಮರಾಜ್, ರವಿ, ಬಿ.ಪ್ರಕಾಶ್, ಯೋಗ ತರಬೇತುದಾರ ಬಿ.ಎಂ.ಗಿರೀಶ್ ಮತ್ತಿತರಿದ್ದರು.