ಜೀವನಪಾಠ ಕಲಿಸುವ ಆಟದಲ್ಲಿ ಮಕ್ಕಳು ಆಸಕ್ತರಾಗುವಂತೆ ಮಾಡಿ: ಕುಂತಿಬೋಪಯ್ಯ

10adarshkdga1
Published on

ಮಡಿಕೇರಿ: ಆಟೋಟಗಳು ಅನೇಕ ರೀತಿಯಲ್ಲಿ ಜೀವನ ಪಾಠಗಳನ್ನು ಕಲಿಸುವುದರಿಂದಾಗಿ ಪ್ರತೀಯೋರ್ವರೂ ಕ್ರೀಡಾಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿಬೋಪಯ್ಯ ಕರೆ ನೀಡಿದರು.


ವಿರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಪ್ರಸಾದ ಭವನದಲ್ಲಿ ಸೋಮವಾರ ಆಯೋಜಿತ ೨೦೯ನೇ ಹೊಂಬೆಳಕು ತತ್ವ ಚಿಂತನಾಗೋಷ್ಠಿ ಮತ್ತು ಕುಂತಿಟೀಚರ್ ಸಾಕ್ಷ್ಯ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕ್ರೀಡೆಯಂತೆ ಜೀವನದಲ್ಲಿ ಕೂಡ ಎದುರಾಗುವ ಸೋಲು ಗೆಲವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಇಂಥ ಮನೋಭಾವನೆಯನ್ನು ಜೀವನದಲ್ಲಿ ಕ್ರೀಡೆ ಕಲಿಸುತ್ತದೆ. ಆಧುನಿಕ ಯುಗದಲ್ಲಿ ಮೊಬೈಲ್ ಆಟದತ್ತಲೇ ಮಕ್ಕಳು ಹೆಚ್ಚಿನ ಆಸಕ್ತಿತೋರುತ್ತಿದ್ದಾರೆ. ಹೀಗಾಗಿ ಮಾನಸಿಕವಾಗಿಯೂ, ದೈಹಿಕವಾಗಿಯೂ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಕುಂತಿ ಕಳವಳ ವ್ಯಕ್ತಪಡಿಸಿದರು.


ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅತ್ಯಂತ ಅಗತ್ಯ. ಮಾನಸಿಕ ಉಲ್ಲಾಸಕ್ಕೆ ಕ್ರೀಡೆ ಸಹಕಾರಿ. ಜತೆಗೆ ಕ್ರೀಡೆ ವ್ಯಕ್ತಿಯ ಮನೋಸ್ಥೆರ್ಯದೊಂದಿಗೆ ಉತ್ಸಾಹವನ್ನೂ ಹೆಚ್ಚಿಸುವುದಲ್ಲದೇ ಸಂಘಟನಾ ಚಾತುರ್ಯಕ್ಕೂ ಕಾರಣವಾಗಿದೆ ಎಂದು ಹೇಳಿದರು.


ಕ್ರೀಡಾಸಾಧಕರಿಗೆ ಉದ್ಯೋಗ ಸೇರಿದಂತೆ ಅನೇಕ ಮನ್ನಣೆ ಸುಲಭವಾಗಿ ದೊರಕುತ್ತದೆ. ಕ್ರೀಡೆಯಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು ವಿದ್ಯಾರ್ಥಿಗಳು, ಪಾಲಕರಿಗೆ ಕಿವಿಮಾತು ಹೇಳಿದ ಅವರು, ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಕಲಿಸುವ ಸಂದರ್ಭ ಸಂಯಮ ಅತೀ ಮುಖ್ಯ. ಶಿಕ್ಷಕರ ಕೆಲಸ ಪರಿಶ್ರಮದ್ದಾಗಿದ್ದು, ಇದನ್ನು ಸಮಾಜ ಸದಾ ಗುರುತಿಸುವಂತಾಗಬೇಕು ಎಂದು ಹೇಳಿದರು.


ಅರಮೇರಿ ಕಳಂಚೇರಿ ಮಠದ ಪೀಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕುಂತಿಟೀಚರ್ ಸಾಕ್ಷ್ಯ ಚಿತ್ರದ ಕನಸುಕಣ್ಣುಗಳಿಗೆ ಬೆಳಕಾದ ತಾರೆ ಎಂಬ ಉಪ ಶೀರ್ಷಿಕೆಗೆ ತಕ್ಕಂತೆ ಕುಂತಿಬೋಪಯ್ಯ ಅನೇಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಕಾರಣರಾಗಿದ್ದಾರೆ. ವಿವಿಧ ಮನೋಭಾವ, ವಯೋಮಾನದ ವಿದ್ಯಾರ್ಥಿಗಳನ್ನು ಮನಸ್ಥಿತಿಯನ್ನು ತಿದ್ದಿತೀಡಿ ಉತ್ತಮ ವಿದ್ಯಾರ್ಥಿಗಳನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಪ್ರಭಾವೀ ರಾಜಕಾರಣಿಯ ಪತ್ನಿಯಾಗಿಯೂ ರಾಜಕೀಯದಿಂದ ದೂರವಾಗಿ, ತನ್ನ ವತ್ತಿ ಸಾಧನೆಯನ್ನು ವ್ಯಕ್ತಿಗತವಾಗಿ ಮಾಡಿರುವ ಕುಂತಿ ಬೋಪಯ್ಯ ಎಲ್ಲಾ ರಾಜಕಾರಣಿಗಳ ಪತ್ನಿಯರಿಗೂ ಮಾದರಿಯಾಗಿದ್ದಾರೆ. ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಮೇಲೂ ಸಮಾಜಸೇವಾ ಮನೋಭಾವವನ್ನು ಅವರು ಹೊಂದಿರುವುದೂ ಶ್ಲಾಘನೀಯ ಎಂದರು.


ಭಾರತೀಯ ಸೇನಾ ಪಡೆಯ ಲೆಫ್ಟಿನೆಂಟ್ ಕರ್ನಲ್ ಕುಕ್ಲೂರು ಗ್ರಾಮದ ವಿವೇಕ್ ಸಾಯ ಮಾತನಾಡಿ, ಸೈನಿಕರು, ವೈದ್ಯರು ಮತ್ತು ಶಿಕ್ಷಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಇವರು ಜನತೆಗೆ ನೀಡುವ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಹೀಗಾಗಿ ಇವರನ್ನು ಸಮಾಜದ ಜನತೆ ಸದಾ ಗೌರವಿಸುತ್ತಿರಬೇಕು. ಸೇನಾ ಕರ್ತವ್ಯದಲ್ಲಿ ಮಾನವೀಯ ಗುಣಗಳು ಮುಖ್ಯವಾಗುತ್ತದೆ. ಭಾರತೀಯ ಸೇನೆಗೆ ಜಗತ್ತಿನಲ್ಲಿಯೇ ಅಪಾರವಾದ ಗೌರವ ಇದ್ದು, ಹೀಗಾಗಿ ಹೆಚ್ಚು ಯುವಕ, ಯುವತಿಯರು ಸೇನೆಗೆ ಸೇರ್ಪಡೆಯಾಗಬೇಕೆಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಕುಂತಿಬೋಪಯ್ಯ, ಸೇನಾಧಿಕಾರಿ ವಿವೇಕ್ ಹಾಗೂ ಕುಂತಿ ಟೀಚರ್ ಸಾಕ್ಷ್ಯ ಚಿತ್ರ ನಿರ್ದೇಶಕ ಎಚ್.ಟಿ.ಅನಿಲ್‌ರವರನ್ನು ಕಳಂಚೇರಿ ಮಠದ ಪರವಾಗಿ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸನ್ಮಾನಿಸಿದರು.


ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬಿ.ಜಿ.ಅನಂತಶಯನ, ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್, ಡಾ.ಎಸ್.ವಿ.ನರಸಿಂಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net