ಪಠ್ಯದ ಜತೆಗೆ ಉದ್ಯೋಗ ಕೌಶಲ ಪಡೆಯಿರಿ

ಪಠ್ಯದ ಜತೆಗೆ ಉದ್ಯೋಗ ಕೌಶಲ ಪಡೆಯಿರಿ
Published on

ಹಾಸನ: ಯುವಕರು ವಿದ್ಯಾಭ್ಯಾಸದ ಅವಧಿಯಲ್ಲಿ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಪದವಿ ನಂತರ ಉದ್ಯೋಗ ಪಡೆಯಲು ಬೇಕಾಗುವ ಕೌಶಲಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಿ.ಲೋಹಿತ್ ಹೇಳಿದರು.

ನಗರದ ಆರ್.ಸಿ.ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಮತ್ತು ಮಾಹಿತಿ ಘಟಕ ಹಾಗೂ ಐ.ಕ್ಯೂ.ಎ.ಸಿ. ಘಟಕದ ವತಿಯಿಂದ ಸಂದರ್ಶನದ ಕಲೆಗಳು ಹಾಗೂ ಸ್ವವಿವರ ಪ್ರತಿ ಬರವಣೆಗೆ ಕುರಿತು ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಹುತೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಪಠ್ಯದ ಅಧ್ಯಯನದಲ್ಲಿ ಮುಂದಿರುತ್ತಾರೆ. ಆದರೆ ಜೀವನ ರೂಪಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಹುತೇಕರು ಒಳ್ಳೆಯ ಉದ್ಯೋಗ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಪದವಿ ಪಡೆಯುವ ಯುವಕ, ಯುವತಿಯರು ಮುಖ್ಯವಾಗಿ ಸಂದರ್ಶನ ಎದುರಿಸುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಸಾಮಾನ್ಯ ಜ್ಞಾನ, ವಾಕ್ಚಾತುರ್ಯ, ಆಂಗಿಕ ಭಾಷೆಯಿಂದ ಹಿಡಿದು ಸಂದರ್ಶನಕ್ಕೆ ಬೇಕಾಗುವ ಎಲ್ಲ ಅಂಶಗಳನ್ನು ಕರಗತ ಮಾಡಿಕೊಳ್ಳಬೇಕು. ಹಾಗೆಯೇ ಸ್ವವಿವರ ಪ್ರತಿ ರಚನೆ ಮಾಡುವುದನ್ನು ಸಹ ಕಲಿತಿರಬೇಕು. ಒಂದು ಸ್ಪಷ್ಟವಾದ, ಆಕರ್ಷಕವಾಗಿ ಕಾಣುವ ಸ್ವವಿವರದ ಪ್ರತಿಗಳು ಯಾವುದೇ ವ್ಯಕ್ತಿಯ ಬೌದ್ಧಿಕ ಮಟ್ಟವನ್ನು ಅರಿಯುತ್ತವೆ. ಹಾಗಾಗಿ ಯುವಕರು ಜೀವನದಲ್ಲಿ ಒಂದೊಳ್ಳೆಯ ಉದ್ಯೋಗ ಪಡೆಯಬೇಕಾದರೆ ಸಂದರ್ಶನದ ಕಲೆ ಹಾಗೂ ಸ್ವ-ವಿವರದ ಪ್ರತಿ ರಚನೆಯ ಕೌಶಲ ಕಲಿಯುವುದು ಅತ್ಯವಶ್ಯವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಿ.ಕೆ.ಮಂಜಯ್ಯ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಅವಧಿಯಲ್ಲಿ ಸಮಯವನ್ನು ವ್ಯರ್ಥ ಮಾಡದೆ ಜ್ಞಾನ ಸಂಪಾದನೆ ಮಾಡಬೇಕು. ಯಾವುದೇ ವ್ಯಕ್ತಿಗೆ ಜ್ಞಾನದ ಹಸಿವು ಇದ್ದಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಯುವಕ, ಯುವತಿಯರು ಇಂದು ಅತ್ಯಗತ್ಯವಾಗಿ ಸಂವಹನ ಕೌಶಲ ಕಲಿಯಬೇಕಾದ ಅವಶ್ಯಕತೆ ಇದೆ. ಅನೇಕರು ಯಾರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುವುದನ್ನೇ ತಿಳಿದಿಲ್ಲ. ಹಾಗಾಗಿ ಸಂವಹನ ಕೌಶಲದೊಂದಿಗೆ ಸಂದರ್ಶನದ ಕಲೆಗಳನ್ನು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿಯೇ ಕಲಿಯಬೇಕು ಎಂದರು.

ಉದ್ಯೋಗ ಮತ್ತು ಮಾಹಿತಿ ಘಟಕದ ಸಂಚಾಲಕ ಪಿ.ನಂದನ್, ಐ.ಕ್ಯೂ.ಎ.ಸಿ. ಸಂಚಾಲಕ ಜಿ.ಆರ್.ಮೋಹನ್ ಕುಮಾರ್, ಸಹ ಸಂಚಾಲಕಿ ಡಿ.ಜೆ.ರಮ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net