ಪರಿಸರ ಕಾಳಜಿಯುಳ್ಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ: ಶಾಸಕ ಟಿ.ಎಸ್.ಶ್ರೀವತ್ಸ ಸಲಹೆ

3
Published on

ಮೈಸೂರು: ಪರಿಸರ ಕಾಳಜಿಯುಳ್ಳ ಚಟುವಟಿಕೆಯಲ್ಲಿ ಯುವಪೀಳಿಗೆ ಹೆಚ್ಚು ಪಾಲ್ಗೊಳ್ಳಲು ಗಮನ ವಹಿಸಬೇಕು. ಹಸಿರಿನ ವಾತಾವರಣ ಹೆಚ್ಚಾದಷ್ಟು ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಹಸಿರುಲೋಕ ಸಂಘಟನೆಯಿಂದ ಚಾಮರಾಜಪುರಂನ ನ್ಯಾಯಾಲಯದ ಮುಂಭಾಗ ಇರುವ ಮನುವನ ಉದ್ಯಾನದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗಿಡ’ ಆಯುರ್ವೇದ ಸಸಿಗಳ ವಿತರಣೆ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಪರಿಸರ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಯುವ ಜನತೆ ಪರಿಸರ ಕಾಳಜಿಯ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸಬೇಕು. ನೈಸರ್ಗಿಕ ಆಯುರ್ವೇದ ಗುಣಗಳಿರುವ ಆಹಾರಗಳನ್ನು ಸೇವಿಸಿದಷ್ಟು ಮನುಷ್ಯ ಆಯುಷ್ಯವಾಗಿ ಬಾಳುತ್ತಾನೆ ಹಾಗಾಗಿ ಮನೆಗೊಂದು ಗಿಡ ಅಭಿಯಾನ ಹೆಚ್ಚು ಉಪಯುಕ್ತವಾಗಿದೆ ಎಂದರು.
ಹಸಿರುಲೋಕ ಅಭಿಯಾನದ ಸಂಚಾಲಕ ಅಜಯ್ ಶಾಸ್ತ್ರಿ ಮಾತನಾಡಿ, ಮಧುಮೇಹ ರಕ್ತದೊತ್ತಡ ನಿಯಂತ್ರಣ ಶೀತ ವಾಯು ಜ್ವರ ಸೋಂಕು ವಿವಿಧ ರೋಗಗಳು ಬರದ ಹಾಗೆ ದೇಹದ ಅಂಗಾಂಗಗಳ ಆರೋಗ್ಯ ನಿರ್ವಹಣೆಯಲ್ಲಿ ಔಷಧವಾಗಿ ಆಯುರ್ವೇದ ಸಸಿಗಳ ಪೋಷಣೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ಕಳೆದ ಎಂಟು ವರ್ಷಗಳಿಂದಲೂ ಹಸಿರುಲೋಕ ಅಭಿಯಾನ ಆಯೋಜಿಸುತ್ತಾ ಬಂದಿದ್ದು ಈ ವರ್ಷ ‘ಮನೆಗೊಂದು ಗಿಡ’ ಆಯುರ್ವೇದ ಸಸಿಗಳ ವಿತರಣೆ ಮತ್ತು ಆಯುರ್ವೇದ ಸಸಿಗಳ ಮಹತ್ವ ತಿಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಒಂದು ವರ್ಷ ಹಂತ, ಹಂತವಾಗಿ 50 ಸಾವಿರ ಸಸಿಗಳ ವಿತರಣೆ ಮಾಡುವ ಗುರಿಯಿದೆ ಎಂದರು.
ಆಯುರ್ವೇದ ಗಿಡಗಳಾದ ಅಮೃತಬಳ್ಳಿ, ಮೈಸೂರು ವೀಳ್ಯದೆಲೆ, ಅಲೋವೆರಾ, ಉತರಾನಿ, ಲಕ್ಕಿ, ಹಿಪ್ಪಳಿ, ನೀಲಬೇವು, ಆಡಸೋಗೆ, ರನಪಾಲ, ಇನ್ಸೂಲಿನ್, ಕರಿಬೇವು, ಕಾಡಶುಂಠಿ, ನಿಂಬೆ, ಪಪ್ಪಾಯಿ, ದಾಳಿಂಬೆ, ಸೀತಾಫಲ, ಟಿಂಚರ್, ದಾಸವಾಳ, ದೊಡ್ಡಿಪತ್ರೆ, ಕಾಡಕೊತ್ತಮುರಿ ಸೇರಿದಂತೆ 30 ತರಹದ ವಿವಿಧ ಜಾತಿಯ ಆಯುರ್ವೇದ ಸಸಿಗಳನ್ನು ವಿತರಿಸಲಾಯಿತು.
ಮುಖಂಡರಾದ ಮೈ.ವಿ.ರವಿಶಂಕರ್, ಮಾ.ಮೋಹನ್, ಜೋಗಿ ಮಂಜು, ನಗರಪಾಲಿಕೆ ಮಾಜಿ ಸದಸ್ಯೆ ಸೌಮ್ಯಾ ಉಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ಜೀವಧಾರ ಗಿರೀಶ್, ಆಯೋಜಕರಾದ ರಾಕೇಶ್‌ಗೌಡ, ವಿಕ್ರಂ ಅಯ್ಯಂಗಾರ್, ಪ್ರದೀಪ್, ಪ್ರಶಾಂತ್ (ಪಚ್ಚಿ), ರಾಜಣ್ಣ, ಸಿ.ಸಂದೀಪ್, ಮಹೇಶ್, ಅರುಣ್, ರಾಘವೇಂದ್ರ, ಚಕ್ರಪಾಣಿ, ಸಂತೋಷ್, ಭೈರತ್ತಿ ಲಿಂಗರಾಜು, ಸಚಿನ್, ಎಸ್.ಎನ್ ರಾಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net