ಉದ್ಯಮದ ಜತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಿ

27_Meeting
Published on

ಮೂಗೂರು: ರೈತರು ಮೂಲ ಉದ್ಯಮದ ಜತೆಗೆ ಹೈನುಗಾರಿಕೆಯಲ್ಲಿ ತೊಡಗಿ ಹಾಲು ಉತ್ಪಾದನೆ ಮಾಡುವುದರ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಗ್ರಾಮದ ಹಿರಿಯ ಮುಖಂಡ ಎಂ.ಡಿ. ಬಸವರಾಜು ಹೇಳಿದರು.

ಮೂಗೂರಿನ ವಾಲ್ಮಿಕಿ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ಮೂಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರ ಮಾದರಿ ಸಂಘವಾಗಿದೆ. ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಒಗ್ಗಟ್ಟಿನಿಂದ ಅಚ್ಚುಕಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಸಂಘದ ಒಳಿತಿಗಾಗಿ ನಿಮಗೆ ಸಿಗುವ ಸವಲತ್ತನ್ನು ಕೊಡಿಸಲು ಸರ್ಕಾರದ ಮಟ್ಟದಲ್ಲಿ ಗಮನಹರಿಸಿ ಅಗತ್ಯವಾದ ಅನುದಾನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಎಂ.ಎಂ.ಬಸವಣ್ಣ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ಪಾದಕರು ಸಕ್ರಿಯ ಸದಸ್ಯರೇ ಸಂಘದ ಬೆನ್ನೆಲುಬು. ಡೇರಿಗೆ ಗುಣಮಟ್ಟದ ಹಾಲು ನೀಡುವುದರ ಮೂಲಕ ಹೈನುಗಾರಿಕೆಗೆ ಉತ್ತೇಜನ ನೀಡಿ ಹಾಲಿನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ನಾಗೇಂದ್ರ ಮಾತನಾಡಿ, ಪ್ರಸ್ತುತ ಸಾಲಿನಲ್ಲಿ 191 ಮಂದಿ ಸದಸ್ಯರನ್ನು ಹೊಂದಿದ್ದು, ಸಂಘ ಉತ್ತಮ ಲಾಭ ಗಳಿಸಿದೆ. ರೈತರ ಕಲ್ಯಾಣ ಟ್ರಸ್ಟ್ ವತಿಯಿಂದ 18 ರಿಂದ 59 ವರ್ಷದ ಹಾಲು ಉತ್ಪಾದಕರು ಅಕಾಲಿಕ ಮರಣ ಹೊಂದಿದ್ದಲ್ಲಿ ಸಂಘದಿಂದ ಪರಿಹಾರವಾಗಿ 1 ಲಕ್ಷ ರೂ. ಹಾಗೂ 60 ವರ್ಷ ಮೇಲ್ಪಟ್ಟವರಿಗೆ 20 ಸಾವಿರ ರೂ.ಪರಿಹಾರ ನೀಡಲಾಗುವುದು ಎಂದರು.

ಸಂಘಕ್ಕೆ ಗುಣಮಟ್ಟದ ಅತಿ ಹೆಚ್ಚು ಹಾಲು ಪೂರೈಸಿದ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಒಕ್ಕೂಟದ ನಿರ್ದೇಶಕ ಪ್ರಕಾಶ್, ವಿಸ್ತರಣಾಧಿಕಾರಿ ಶ್ರುತಿ, ಸಂಘದ ಉಪಾಧ್ಯಕ್ಷ ಮಹದೇವಸ್ವಾಮಿ, ನಿರ್ದೇಶಕ ಮಹದೇವ ನಾಯಕ, ಮಹದೇವಗೌಡ, ಗೌರಮ್ಮ, ಚಿಕ್ಕಮ್ಮ, ಸುಂದರಮ್ಮ, ಮಂಜುಳಾ, ಮಲ್ಲೇಶ, ಗೋವಿಂದ್ ರಾಜ್, ಮಹದೇವ್ ಶೆಟ್ಟಿ, ಸಿದ್ದಪ್ಪ ದೇವಾನಂದ್, ಎಂ.ನಾಗರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net