

ಹುಬ್ಬಳ್ಳಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ನ (ಎನ್‌ಸಿಇಆರ್‌ಟಿ) 2023-24 ನೇ ಸಾಲಿನ ರಾಷ್ಟ್ರೀಯ ಶೈಕ್ಷಣಿಕ ನಾವಿನ್ಯತಾ ಪುರಸ್ಕಾರ ಇಲ್ಲಿಯ ವಿಶ್ವೇಶ್ವರ ನಗರದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ ಸುಧಾ ಎಂ. ಶೀಲವಂತರ (ಹಾದಿಮನಿ) ಅವರಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯ ಮೂರುಸಾವಿರ ಮಠದಲ್ಲಿ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರು ಸುಧಾ ಶೀಲವಂತರ ಅವರಿಗೆ ಮಂಗಳವಾರ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಶಿಕ್ಷಕಿ ಸುಧಾ ಅವರು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದು ಹುಬ್ಬಳ್ಳಿ ಗೌರವ ಹೆಚ್ಚಿಸಿದ್ದಾರೆ. ಇಂಥ ಪ್ರತಿಭಾನ್ವಿತ ಶಿಕ್ಷಕಿಯರು ಇನೊಬ್ಬರಿಗೆ ಮಾರ್ಗದರ್ಶನ ಮಾಡಬೇಕು ಎಂದು ಆಶೀರ್ವದಿಸಿದರು.
ಪ್ರತಿಭಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಸುಧಾ ಶೀಲವಂತರ (ಹಾದಿಮನಿ), ಪ್ರಶಸ್ತಿ ನನಗೆ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಸೇವೆ ಸಲ್ಲಿಸಬೇಕೆಂಬ ಪ್ರೇರಣೆ ನೀಡಿದೆ ಎಂದರು.
ರಾಜು ಶೀಲವಂತರ, ಮಲ್ಲಿಕಾರ್ಜುನ ಹಾದಿಮನಿ, ರವಿ ಸಿದ್ದರಾಮಶೆಟ್ಟರ್, ಅಮರೇಶ ಹಿಪ್ಪರಗಿ, ಬಸವರಾಜ ಅಂಗಡಿ, ಸುಮಾ ಶೀಲವಂತರ, ಅಜ್ಜಪ್ಪ ಬೆಂಡಿಗೇರಿ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಸುಮಾ ಶೀಲವಂತರ ಇತರರಿದ್ದರು.