

ಹನೂರು: ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ದೋಷರಹಿತ ಆರ್‌ಟಿಸಿ ಹೊಂದಬೇಕು ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ತಾಲೂಕಿನ ಗಡಿಗ್ರಾಮ ಅರ್ಥನಾರಿಪುರ ಬುಡಕಟ್ಟು ಆಶ್ರಮ ಶಾಲೆಯಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿ,
ಸರ್ಕಾರದ ಯೋಜನೆಗಳನ್ನು ಜನರ ಬಳಿಗೆ ಕೊಂಡೊಯ್ಯುವುದೇ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದ ಅರ್ಜಿಗಳ ವಿಲೇವಾರಿ ಪಾರದರ್ಶಕವಾಗಿದ್ದು, ಸ್ಥಳದಲ್ಲಿಯೇ ಪರಿಹರಿಸಬಹುದಾದ ಸಮಸ್ಯೆಗಳು ನಿವಾರಣೆಯಾಗಲಿದೆ.ರೈತರು ಪಹಣಿ ಪತ್ರದಲ್ಲಿನ ಹೆಸರು, ವಿಸ್ತೀರ್ಣದಲ್ಲಿನ ಲೋಪದೋಷ, ಪೌತಿ ಖಾತೆ ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿನ ಇನ್ನಿತರ ದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಪ್ರತಿಯೊಬ್ಬ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ ವೇತನ, ವೃದ್ಧಾಪ್ಯ, ವಿಧವಾ ವೇತನ, ಮನಸ್ವಿನಿ, ಮೈತ್ರಿ ಯೋಜನೆಯಡಿ ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಅರ್ಹ ಫಲಾನುಭವಿಗಳು ಕೂಡಲೇ ಅರ್ಜಿ ಸಲ್ಲಿಸಿ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ 126 ಅರ್ಜಿಗಳು ಸಲ್ಲಿಕೆಯಾದವು. ಗ್ರಾಪಂ ಸದಸ್ಯರಾದ ಉಮಾ ಮಹೇಶ್ವರಿ, ನಾಗಪ್ಪ, ಆರ್‌ಐ ಮಾದೇಶ್, ಗ್ರಾಮ ಆಡಳಿತ ಅಧಿಕಾರಿಗಳಾದ ಕಾರ್ತಿಕ್, ಶರವಣನ್, ಗ್ರಾಪಂ ಕಾರ್ಯದರ್ಶಿ ವೆಂಕಟೇಶ್, ಮುಖಂಡರಾದ ಲಿಂಗರಾಜು, ಕುಮಾರಸ್ವಾಮಿ, ಮಾದೇವ ಇನ್ನಿತರರು ಇದ್ದರು.