

ಶೃಂಗೇರಿ: ಜೀವನ ಪರಿಪೂರ್ಣತೆಗೆ ಸಹಕಾರ ನೀಡಿದ ಪಾಲಕರು ಹಾಗೂ ಶಿಕ್ಷಣ ನೀಡಿದ ಸಂಸ್ಥೆಯನ್ನು ಯಾರೂ ಮರೆಯಬಾರದು. ಅವರೆಲ್ಲರ ಸಹಕಾರವನ್ನು ಬದುಕಿನ ಪ್ರತಿಹಂತದಲ್ಲೂ ನೆನಪಿಸಿಕೊಂಡು ಸಮಾಜದ ಶ್ರೇಯಸ್ಸಿಗೆ ತನ್ನದೇ ಆದ ಕೊಡುಗೆ ನೀಡಬೇಕು ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ ಡಾ. ಎಚ್.ಎಸ್.ಬಲ್ಲಾಳ್ ತಿಳಿಸಿದರು.
ಬುಧವಾರ ಜೆಸಿಬಿಎಂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಕೆ.ವಿ.ಆರ್.ಟ್ಯಾಗೋರ್ ಸ್ಮಾರಕಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಅನಕ್ಷರತೆ, ಅನಾರೋಗ್ಯ ಹಾಗೂ ಬಡತನ ಇದ್ದಾಗ ದೇಶದ ಪ್ರಗತಿ ಕುಂಠಿತವಾಗುತ್ತದೆ ಎಂಬ ದೃಷ್ಟಿಕೋನದಿಂದ ಡಾ. ಟಿ.ಎಂ.ಎ. ಪೈ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಅವರ ದೂರದೃಷ್ಟಿ ಸರ್ವರಿಗೂ ಮಾದರಿ. ಕಟ್ಟಡ ನಿರ್ಮಾಣ ಮಾಡುವುದು ಎಷ್ಟು ಕಷ್ಟವೋ ಅದರ ನಿರ್ವಹಣೆ ಕೂಡಾ ಅಷ್ಟೇ ಪ್ರಾಮುಖ್ಯ. ಹಳೇ ವಿದ್ಯಾರ್ಥಿ ಸಂಘ 450ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜತೆ ನೂತನ ಕಟ್ಟಡ ಸ್ಥಾಪಿಸಿ ಸಮುದಾಯಕ್ಕೆ ಅರ್ಪಣೆ ಮಾಡಿರುವುದು ಸರ್ವರಿಗೂ ಮಾದರಿ ಎಂದರು.
ಭಾಗ್ಯಾ ಟ್ಯಾಗೋರ್ ಮಾತನಾಡಿ, ಐವತ್ತು ವರ್ಷಗಳ ಹಿಂದೆ ಹಿರಿಯರು ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ನಮಗೆಲ್ಲರಿಗೂ ಆದರ್ಶ. ಎಲ್ಲರೂ ಒಗ್ಗೂಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಹಳೇ ವಿದ್ಯಾರ್ಥಿ ಸಂಘದ ನೂತನ ಕಟ್ಟಡ ನಿರ್ಮಾಣವಾಗಿದೆ. ಇದರ ಸದುಪಯೋಗವನ್ನು ಸರ್ವರೂ ಪಡೆಯಲಿ ಎಂದು ಆಶಿಸಿದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎ.ಕೆ.ಅಜಿತ್ ಅಣ್ಕುಳ್ಳಿ, ಕಾರ್ಯದರ್ಶಿ ಎಚ್.ಟಿ.ರಮೇಶ್, ಸಂಘದ ಗೌರವಾಧ್ಯಕ್ಷ ಕೆ.ಎನ್.ಗೋಪಾಲ್ ಹೆಗ್ಡೆ, ಭಾರತೀ ವಿದ್ಯಾಸಂಸ್ಥೆ ಉಪಾಧ್ಯಕ್ಷ ಕೆ.ಎಂ.ಶ್ರೀನಿವಾಸ್ ಕಚ್ಚೋಡಿ, ಪ್ರಾಚಾರ್ಯ ಡಾ. ಸ್ವಾಮಿ ಇದ್ದರು.