ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ಬೆಳಕಾಗಿ

7 akr 1
Published on

ಅಕ್ಕಿಆಲೂರ: ಶಿಕ್ಷಣ ಪಡೆದ ಮಗುವೊಂದು ಮನೆತನಕ್ಕೆ ಮಾತ್ರವಲ್ಲದೆ, ದೇಶದ ಅಭಿವೃದ್ಧಿಗೆ ಬೆಳಕಾಗಬೇಕು. ಅಂತಹ ಶಿಕ್ಷಣವನ್ನು ನಿಸ್ವಾರ್ಥ ತತ್ವದಡಿ ಶಿಕ್ಷಣ ಸಂಸ್ಥೆಗಳು ಪೂರೈಸಬೇಕು ಎಂದು ಮುತ್ತಿನಕಂತಿಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಜ್ಞಾನ ಭಾರತಿ ವಿದ್ಯಾವರ್ಧಕ ಸಂಘದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಿಂದ ಮಗುವಿನಲ್ಲಿ ಆಗುತ್ತಿರುವ ಪರಿಣಾಮಗಳ ಕುರಿತು ವಿಮರ್ಶೆ ಅಗತ್ಯವಿದೆ. ಭಾರತದಲ್ಲಿ ಗುರುಕುಲ ಶಿಕ್ಷಣ ಜಾರಿಯಲ್ಲಿದ್ದಾಗ, ಸತ್ಯ, ನೀತಿ, ಧರ್ಮ, ಸದಾಚಾರಗಳು ರಾರಾಜಿಸಿತ್ತು. ಆದರೆ, ಕಾಲಾನುಕ್ರಮದಲ್ಲಿ ಎಲ್ಲವೂ ಇತಿಹಾಸದ ಪುಟ ಸೇರಿವೆ ಎಂದರು.

ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಕಟ್ಟಡಗಳು ನವೀಕೃತಗೊಂಡು, ನೂತನಗೊಂಡು ಅನೇಕ ಅಭಿವೃದ್ಧಿಗಳು ಕಾಣಸಿಗುತ್ತವೆ. ಆದರೆ, ಭವ್ಯ ಕಟ್ಟಡದಲ್ಲಿ ದಿವ್ಯಶಕ್ತಿಗಳ ಉದಯವಾಗಬೇಕು. ಒಬ್ಬ ಶಿಕ್ಷಕ ನಿಜವಾದ ಸಮಾಜ ಸುಧಾರಕ. ಸಾವಿರಾರು ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿ ಗುರುಗಳ ಮೇಲಿದೆ ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ನೈತಿಕ ಪ್ರಜ್ಞೆ ಮತ್ತು ಮಾನವೀಯ ಗುಣಗಳು ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಸಕಾರಾತ್ಮಕ ಚಿಂತನೆಗಳಿಗೆ ಶಿಕ್ಷಕರು ಮತ್ತು ಪಾಲಕರು ಪ್ರಚೋದಿಸಬೇಕು. ಭವಿಷ್ಯದ ನಾಳೆಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಧಾರ್ವಿುಕ ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ ಭಾಗಿಯಾಗಿದ್ದರು. ಗ್ರಾಪಂ ಅಧ್ಯಕ್ಷ ಮಖಬೂಲ್ ಅಹ್ಮದ್ ರುಸ್ತುಂಖಾನವರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಂ.ಎಚ್. ಬ್ಯಾಡಗಿ, ಟಾಕನಗೌಡ ಪಾಟೀಲ, ಜ್ಞಾನ ಭಾರತಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮ್ಮ ಶೇಷಗಿರಿ, ನಿರ್ದೇಶಕರಾದ ಎಸ್.ಎಂ. ಹುಣಸಿಕಟ್ಟಿ, ಆರ್.ಜಿ. ಗುಡಿಕೇರಿ, ಸದಾಶಿವ ಬೆಲ್ಲದ, ವಿ.ಪಿ. ಗುರಪ್ಪನವರ, ಕೃಷ್ಣಾ ಆಲದಕಟ್ಟಿ, ಕೆ.ಎಸ್. ಕುಂಬಾರ, ಸುಜಾತಾ ಪಸಾರದ, ಶಶಿಕಲಾ ಶೇಷಗಿರಿ, ಜಿ.ವಿ. ಬಡಿಗೇರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net