ಕಂಪ್ಯೂಟರ್ ಶಿಕ್ಷಣ ಪಡೆಯಿರಿ

nrp comp
ಎನ್.ಆರ್.ಪುರದಲ್ಲಿ ಕಂಪ್ಯೂಟರ್ ಹಾಗೂ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಕಲ್ಪನಾ, ವರ್ಕಾಟೆ ಸುಧಾಕರ, ಪೃಥ್ವಿ ಇತರರಿದ್ದರು.
Published on

ಎನ್.ಆರ್.ಪುರ: ಎಲ್ಲ ಕ್ಷೇತ್ರದಲ್ಲೂ ಕಂಪ್ಯೂಟರ್ ಅವಶ್ಯಕತೆ ಇರುವುದರಿಂದ ಪ್ರತಿಯೊಬ್ಬರೂ ಕಂಪ್ಯೂಟರ್ ಶಿಕ್ಷಣ ಕಲಿಯಬೇಕು ಎಂದು ರಾಜ್ಯ ಪಾರಂಪರಿಕ ವೈದ್ಯರ ಕೌನ್ಸಿಲ್ ಅಧ್ಯಕ್ಷೆ ಕಲ್ಪನಾ ಹೇಳಿದರು.

ಚೈತನ್ಯ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಕಂಪ್ಯೂಟರ್ ಹಾಗೂ ಟೈಲರಿಂಗ್ ಕೌಶಲ ತರಬೇತಿ ಪಡೆದ 60 ಮಹಿಳೆಯರಿಗೆ ಶನಿವಾರ ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದಿಂದ ಕೌಶಲ ತರಬೇತಿ ಉಚಿತವಾಗಿ ನೀಡಲಾಗುತ್ತಿದೆ. ಟೈಲರಿಂಗ್ ಕಲಿತರೆ ಮನೆಯಲ್ಲೇ ಉದ್ಯೋಗ ಮಾಡಬಹುದು. ಟೈಲರಿಂಗ್‌ನಲ್ಲೂ ಗ್ಲಾಸ್ ವರ್ಕ್, ಪೈಂಟಿಂಗ್, ಎಂಬ್ರಾಯಿಡ್ ಡಿಸೈನ್ ಮಾಡಬಹುದು ಎಂದರು.
ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ವೃತ್ತಿ ಜತೆ ಪ್ರವೃತ್ತಿಯನ್ನೂ ಮಾಡಿ ಹೆಸರು ಗಳಿಸಬಹುದು. ಗ್ರಾಮೀಣ ಭಾಗದವರು ಎಂದು ಮುಜುಗರಪಟ್ಟುಕೊಳ್ಳಬಾರದು ಎಂದು ಹೇಳಿದರು.
ಎಕ್ಸೆಲ್ ಕಂಪ್ಯೂಟರ್ ವ್ಯವಸ್ಥಾಪಕ ವರ್ಕಾಟೆ ಸುಧಾಕರ್ ಮಾತನಾಡಿ, 5 ವರ್ಷದಿಂದ ಮಹಿಳೆಯರಿಗೆ ಪ್ರತಿ ವರ್ಷ ಉಚಿತವಾಗಿ ಟೈಲರಿಂಗ್ ಹಾಗೂ ಕಂಪ್ಯೂಟರ್ ಕೌಶಲ ತರಬೇತಿ ನೀಡುತ್ತಿದ್ದೇವೆ. ತರಬೇತಿ ಪಡೆದ ಮಹಿಳೆಯರಿಗೆ ಸರ್ಕಾರದಲ್ಲಿ ಉದ್ಯೋಗದ ಅವಕಾಶವಿದೆ. ಸ್ವಯಂ ಉದ್ಯೋಗವನ್ನೂ ಮಾಡಬಹುದು ಎಂದು ತಿಳಿಸಿದರು.
ಕಂಪ್ಯೂಟರ್ ಶಿಕ್ಷಕಿಯರಾದ ಶ್ರುತಿ ಸುಧಾಕರ್, ಪ್ರಥ್ವಿ, ಟೈಲರಿಂಗ್ ತರಬೇತುದಾರರಾದ ಸಹನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net