

ವಿಜಯಪುರ : ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳಡಿ ಆಯ್ಕೆಯಾದ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ಅರ್ಹ ಫಲಾನುಭವಿಗಳಿಗೆ ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಮಂಜೂರಾತಿ ಆದೇಶ ಪತ್ರ ವಿತರಿಸಿದರು.
ನಗರದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಬಲೇಶ್ವರ ಮತೇತ್ರದ ತಿಕೋಟಾ ತಾಲೂಕಿನ 198 ಮತ್ತು ಬಬಲೇಶ್ವರ ತಾಲೂಕಿನ 127 ಸೇರಿ 325 ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.
ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲರ ವೇತನ, ಸಂಧ್ಯಾ ಸುರಾ ಪಿಂಚಣಿ ಯೋಜನೆ ಮತ್ತು ಮೈತ್ರಿ ಹಾಗೂ ಮನಸ್ವಿನಿ ಪಿಂಚಣಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಬಬಲೇಶ್ವರ ಮತೇತ್ರ ವ್ಯಾಪ್ತಿಯ 29 ಗ್ರಾಪಂ ಮತ್ತು ಎರಡು ಪಪಂಗಳ ಒಟ್ಟು 325 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ವಿ.ಪ. ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರ ಮುತುವರ್ಜಿಯಿಂದಾಗಿ ಫಲಾನುಭವಿಗಳಿಗೆ ಸದ್ಯ ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ. ಆದೇಶ ಪತ್ರ ಪಡೆದಿರುವ ಫಲಾನುಭವಿಗಳು ಸರ್ಕಾರದ ಸೌಲಭ್ಯ ದುಪಯೋಗಪಡಿಸಿಕೊಂಡು ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಹೊಸದಾಗಿ ಪಿಂಚಣಿ ಯೋಜನೆಯ ಲಾಭ ಪಡೆಯಲು ಬಯಸುವವರು ನೇರವಾಗಿ ಶಾಸಕರ ಕಚೇರಿಯನ್ನು ಸಂಪರ್ಕಿಸಿ ಉಚಿತವಾಗಿ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ. ಯಾರೂ ಮಧ್ಯವರ್ತಿಗಳ ಮಾತಿಗೆ ಮರುಳಾಗಬಾರದು ಎಂದು ಕಿವಿಮಾತು ಹೇಳಿದರು.