

ಸುಂಟಿಕೊಪ್ಪ: ಮಂಜಿಕೆರೆ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ನೂರಾರು ಜನರು ಪಾಲ್ಗೊಳ್ಳುವ ಮೂಲಕ ಶಿಬಿರದ ಪ್ರಯೋಜನ ಪಡೆದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಂಸ್ಥೆ ಹಾಗೂ ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರವನ್ನು ಜ್ಞಾನ ವಿಕಾಸ ಸಂಸ್ಥೆಯ ಸಮನ್ವಯಾಧಿಕಾರಿ ಮಾಲಿನಿ ಉದ್ಘಾಟಿಸಿದರು.
ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆ ಮುಖ್ಯಸ್ಥ ಜಲೀಲ್ ಮಾತನಾಡಿ, ಮಾನವನ ದೇಹದ ಅಂಗಗಳಲ್ಲಿ ಕಣ್ಣು ಮಹತ್ವದ್ದಾಗಿರುತ್ತದೆ. ಅದ್ದರಿಂದ ಕಾಲ ಕಾಲಕ್ಕೆ ಕಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ವೈದ್ಯರಿಂದ ಕಣ್ಣಿನ ದೃಷ್ಟಿಯ ಬಗ್ಗೆ ಸಲಹೆ, ಸೂಚನೆ ಪಡೆದುಕೊಳ್ಳುವುದು ಸೂಕ್ತ ಎಂದರು.
ಮನುಷ್ಯ ಲವ ಲವಿಕೆಯಿಂದ ಇರಬೇಕಾದರೆ, ಸ್ವಚ್ಛಂದವಾಗಿ ಕಾರ್ಯ ನಿರ್ವಹಿಸಬೇಕಾದರೆ ಕಣ್ಣು ದೃಷ್ಟಿ ಅವಶ್ಯಕ. ಹಾಗಾಗಿ ಪ್ರತಿಯೊಬ್ಬರೂ ಕಣ್ಣಿನ ಬಗ್ಗೆ ನಿರಾಸಕ್ತಿ ಹೊಂದಬಾರದೆಂದು ಕಿವಿಮಾತು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 125 ಕ್ಕೂ ಹೆಚಿಚ್ಚು ಜನರು ಶಿಬಿರದ ಸದುಪಯೋಗ ಪಡೆದರು. ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸೇವಾ ಪ್ರತಿನಿಧಿ ಯಶೋದಾ ಬಸವರಾಜ್, ಒಕ್ಕೂಟದ ಕಾರ್ಯದರ್ಶಿ ಮುತ್ತು, ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆ ಸಿಬ್ಬಂದಿ ಇದ್ದರು.