ಇ-ಖಾತೆ ಪಡೆದು ಆಸ್ತಿ ದಾಖಲೆ ಖಾತ್ರಿ ಮಾಡಿಕೊಳ್ಳಿ

IMG-20250303-WA0126
ಕೆಂಗಲ್ ಸಿದ್ದೇಶ್ವರ ದೇವಾಲಯ ಬಳಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಇ-ಸ್ವತ್ತು ಆಂದೋಲನಕ್ಕೆ. ಕೆ.ಎಂ.ಶಿವಲಿಂಗೇಗೌಡ ಚಾಲನೆ ನೀಡಿದರು. ಸಮೀವುಲ್ಲಾ, ಕೃಷ್ಣಮೂರ್ತಿ, ಮನೋಹರ್, ಸದಸ್ಯರಾದ ದರ್ಶನ್, ಜಿ.ಟಿ ಗಣೇಶ್, ರಾಜಶೇಖರ್, ಗುಲ್ಜರ್ ಬಾನು, ಪಲ್ಲವಿ ಸಂತೋಷ್ ಇದ್ದರು.
Published on

ಅರಸೀಕೆರೆ: ನಗರ ವ್ಯಾಪ್ತಿಯಲ್ಲಿರುವ ನಿವೇಶನ, ಕಟ್ಟಡ ಸೇರಿದಂತೆ ಎಲ್ಲ ರೀತಿಯ ಆಸ್ತಿಗಳಿಗೆ ಮಾಲೀಕರು ಇ-ಖಾತೆ ಪಡೆಯುವ ಮೂಲಕ ದಾಖಲೆ ಖಾತ್ರಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

ನಗರದ ಕೆಂಗಲ್ ಸಿದ್ದೇಶ್ವರ ದೇವಾಲಯ ಬಳಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಇ-ಸ್ವತ್ತು ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರ ಸ್ಥಳೀಯ ಸಂಸ್ಥೆಗಳ ಆಡಳಿತ ಮೂಲಕ ನಗರಸಭೆ ಆಸ್ತಿ ಕಣಜದ ತಂತ್ರಾಂಶದಡಿ ಆಸ್ತಿಗಳನ್ನು ದಾಖಲು ಮಾಡಲು ಅವಕಾಶ ಮಾಡಿಕೊಟ್ಟಿದೆ. ಸರಳೀಕೃತ ವ್ಯವಸ್ಥೆ ಆಸ್ತಿ ಮಾಲೀಕರಿಗೆ ವರದಾನವಾಗಿದೆ. ಆದರೆ ಇಪ್ಪತ್ತು ಸಾವಿರಕ್ಕೂ ಅಧಿಕ ಕಟ್ಟಡ ಮತ್ತು ನಿವೇಶನ ಆಸ್ತಿಗಳಿದ್ದು 10ರಿಂದ 12 ಸಾವಿರ ಜನ ಮಾಲೀಕರು ಮಾತ್ರವೇ ದಾಖಲೆ ಸಲ್ಲಿಸಿ ಸ್ವತ್ತಿನ ಹಕ್ಕುನ್ನು ಪಡೆದಿದ್ದಾರೆ. ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಸ್ವೀಕರಿಸಿ ಇಲಾಖೆ ತಂತ್ರಾಂಶದಲ್ಲಿ ದಾಖಲಿಸುತ್ತಿದ್ದಾರೆ. ಎಲ್ಲರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆಂದೋಲನ ಹಮ್ಮಿಕೊಂಡಿದ್ದು, ನಗರ ನಿವಾಸಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ಕೆಲ ತಾಂತ್ರಿಕ ತೊಂದರೆಯಿಂದ ಅಗತ್ಯ ದಾಖಲೆ ಪಡೆಯಲು ವಿಳಂಬವಾಗುವಾಗಿತ್ತು. ಇದನ್ನು ಮನಗಂಡು ಪೌರಾಡಳಿತ ಸಚಿವಾಲಯ ಸಾಕಷ್ಟು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಕೆಲವು ಮಾರ್ಪಾಡುಗಳ ಮೂಲಕ ದಾಖಲೆ ಸರಳೀಕರಣ ವ್ಯವಸ್ಥೆ ತಂದಿದೆ ಎಂದರು.

ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಮಾ.10ರಂದು ಮಲ್ಲೇಶ್ವರ ನಗರ ಬಡಾವಣೆಯ ಕನಕ ಭವನದ ಬಳಿ ನಾಲ್ಕು ವಾರ್ಡ್‌ಗಳ ಕಟ್ಟಡ ಮತ್ತು ನಿವೇಶನಗಳ ಆಸ್ತಿ ದಾಖಲೆ ಆಂದೋಲನ ನಡೆಸಲಾಗುವುದು. ಆಸ್ತಿ ಮಾಲೀಕರು ಭಾಗವಹಿಸಿ ದಾಖಲೆಗಳನ್ನು ನೀಡುವುದರ ಮೂಲಕ ಇ-ಸ್ವತ್ತು ಪಡೆಯಲು ಮುಂದಾಗಬೇಕು. ರಾಜ್ಯಾದ್ಯಂತ ನಡೆಯುತ್ತಿರುವ ಈ ಆಂದೋಲನದಲ್ಲಿ ನಿರ್ದಿಷ್ಟ ಗುರಿಯನ್ನು ತಲುಪಲು ಸಾರ್ವಜನಿಕರ ಸಹಕಾರವೂ ನಮಗೆ ಅಗತ್ಯ ಇದೆ ಎಂದು ಮಾಹಿತಿ ನೀಡಿದರು.

ನಗರಸಭೆ ಉಪಾಧ್ಯಕ್ಷ ಮನೋಹರ್, ಸದಸ್ಯರಾದ ದರ್ಶನ್, ಜಿ.ಟಿ.ಗಣೇಶ್, ರಾಜಶೇಖರ್, ಗುಲ್ಜರ್ ಬಾನು, ಪಲ್ಲವಿ ಸಂತೋಷ್, ಸಂತೋಷ್, ಕಚೇರಿ ವ್ಯವಸ್ಥಾಪಕಿ ಕಲಾವತಿ, ರಾಜಸ್ವ ನಿರೀಕ್ಷಕ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕರಾದ ಲಿಂಗರಾಜು, ರೇವಣ್ಣ ಸಿದ್ದಪ್ಪ ಸೇರಿದಂತೆ ನಗರಸಭೆ ಸಿಬ್ಬಂದಿ ಹಾಗೂ ನಾಗರಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net